ಪಾಕಿಸ್ತಾನ: ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಯನ್ನು "ಆಕ್ಟ್ ಆಫ್ ವಾರ್" ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದು, ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡುವ ಹಕ್ಕು ತಮ್ಮ ದೇಶಕ್ಕಿದೆ ಎಂದಿದ್ದಾರೆ.
ತಮ್ಮ ಸಶಸ್ತ್ರ ಪಡೆಗಳಿಗೆ ಶತ್ರುವನ್ನು ಹೇಗೆ ಎದುರಿಸಬೇಕೆಂದು ನಮಗೆ ಗೊತ್ತಿದೆ. ಶತ್ರುವು ತನ್ನ ದುಷ್ಟ ಉದ್ದೇಶದಲ್ಲಿ ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ. ಭಾರತವು ಪಾಕಿಸ್ತಾನದ ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಷರೀಫ್ ಹೇಳಿದ್ದಾರೆ.
ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಪ್ರತಿಕ್ರಿಯಿಸಿ, "ಭಾರತದ ಕ್ಷಿಪಣಿ ದಾಳಿ ಪಾಕಿಸ್ತಾನದ ಸಾರ್ವಭೌಮತ್ವ, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಪ್ರಾದೇಶಿಕ ಶಾಂತಿಗೆ ಅಪಾಯವನ್ನುಂಟು ಮಾಡಿದೆ" ಎಂದಿದ್ದಾರೆ.
"ಪಂಜಾಬ್ ಮತ್ತು ಪಿಒಕೆಯ ನಗರಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ" ಎಂದು ಪಾಕಿಸ್ತಾನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಸಚಿವ ಖವಾಜಾ ಆಸಿಫ್ ಪ್ರತಿಕ್ರಿಯಿಸಿ, "ನಾವು ನಮ್ಮ ಪೂರ್ಣ ಶಕ್ತಿ ಬಳಸಿಕೊಂಡು ಈ ದಾಳಿಗೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ. ಪಾಕಿಸ್ತಾನದ ಪ್ರತಿಕ್ರಿಯೆಯು ಚಲನಶೀಲ ಮತ್ತು ರಾಜತಾಂತ್ರಿಕ ಎರಡೂ ಆಗಿರುತ್ತದೆ ಮತ್ತು ಭಾರತದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಭಯೋತ್ಪಾದಕರ ಶಿಬಿರಗಳನ್ನು ಅಥವಾ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಪರಿಶೀಲನೆ ನಡೆಸಲು ಎಲ್ಲಾ ಸ್ಥಳಗಳು ಮುಕ್ತವಾಗಿವೆ" ಎಂದು ಹೇಳಿದರು.
"ಭಾರತೀಯ ವಾಯುಪಡೆಯು ತನ್ನ ವಾಯುಪ್ರದೇಶದಲ್ಲಿಯೇ ಉಳಿದುಕೊಂಡು ನಡೆಸಿದ ದಾಳಿಯು "ಅಪ್ರಚೋದಿತ ಮತ್ತು ಯುದ್ದದ ಕೃತ್ಯ" ಎಂದು ಪಾಕ್ ವಿದೇಶಾಂಗ ಇಲಾಖೆ ಹೇಳಿದೆ.