image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ್ಯಾಯಮೂರ್ತಿಗಳ ಆಸ್ತಿ ವಿವರವನ್ನು ಸುಪ್ರೀಂ ಕೋರ್ಟ್ ತನ್ನ ವೆಬ್​ಸೈಟ್‌ನಲ್ಲಿ ಹಂಚಿಕೊಂಡಿದೆ...

ನ್ಯಾಯಮೂರ್ತಿಗಳ ಆಸ್ತಿ ವಿವರವನ್ನು ಸುಪ್ರೀಂ ಕೋರ್ಟ್ ತನ್ನ ವೆಬ್​ಸೈಟ್‌ನಲ್ಲಿ ಹಂಚಿಕೊಂಡಿದೆ...

ನವದೆಹಲಿ: ರಾಜಕಾರಣಿಗಳಂತೆ ನ್ಯಾಯಾಧೀಶರು ಕೂಡಾ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ಜನಾಗ್ರಹಕ್ಕೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್​, ಎಲ್ಲ ನ್ಯಾಯಾಧೀಶರ ಆಸ್ತಿ ಮಾಹಿತಿ ಬಹಿರಂಗಪಡಿಸಿದೆ.

ನ್ಯಾಯಾಂಗದಲ್ಲಿ ಪಾರದರ್ಶಕತೆ ಕಾಪಾಡಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಲ್ಲ ನ್ಯಾಯಾಧೀಶರು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಳ್ಳುವಂತೆ ಸೂಚಿಸಿತ್ತು. ಅದನ್ನು ತನ್ನ ವೆಬ್‌ಸೈಟ್​​ನಲ್ಲಿ ಹಂಚಿಕೊಂಡಿದೆ. ಇದರ ಜೊತೆಗೆ ಜಡ್ಜ್​ಗಳ ನೇಮಕಾತಿ ಪ್ರಕ್ರಿಯೆ ಬಗ್ಗೆಯೂ ಮಾಹಿತಿ ನೀಡಿದೆ.

ಸುಪ್ರೀಂ ಕೋರ್ಟ್​ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 55.75 ಲಕ್ಷ ರೂಪಾಯಿ ಭದ್ರತಾ ಠೇವಣಿ, ದೆಹಲಿಯ ದಕ್ಷಿಣ ಭಾಗದಲ್ಲಿ ಮೂರು ಕೋಣೆಗಳ ಫ್ಲಾಟ್, ಕಾಮನ್‌ವೆಲ್ತ್ ಗೇಮ್ಸ್ ಗ್ರಾಮದಲ್ಲಿ 2,446 ಚದರ ಅಡಿ ವಿಸ್ತೀರ್ಣದ 4 ಕೋಣೆಗಳ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.

ನಿಯೋಜಿತ ಸಿಜೆಐ ಬಿ.ಆರ್.ಗವಾಯಿ ಅವರು ಬ್ಯಾಂಕಿನಲ್ಲಿ 19.63 ಲಕ್ಷ ರೂಪಾಯಿ ಹಣ, ಮಹಾರಾಷ್ಟ್ರದ ಅಮರಾವತಿಯಲ್ಲಿ ಆನುವಂಶಿಕವಾಗಿ ಪಡೆದ ಮನೆ, ಮುಂಬೈನ ಬಾಂದ್ರಾ ಮತ್ತು ದೆಹಲಿಯ ಡಿಫೆನ್ಸ್ ಕಾಲೊನಿಯಲ್ಲಿ ತಲಾ ಒಂದು ಅಪಾರ್ಟ್‌ಮೆಂಟ್‌, ಅಮರಾವತಿ ಮತ್ತು ನಾಗ್ಪುರದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದಾರೆ.

ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಮೇ 13ರಂದು ನಿವೃತ್ತರಾಗಲಿರುವ ಸಿಜೆಐ ಸಂಜೀವ್​​ ಖನ್ನಾ ಅವರು, ಗುರುಗ್ರಾಮ್‌ನ ಸೆಕ್ಟರ್ 49 ರ ಸಿಸ್ಪಾಲ್ ವಿಹಾರ್‌ನಲ್ಲಿ 4 ಕೋಣೆಗಳ ಫ್ಲಾಟ್‌ನಲ್ಲಿ ಶೇಕಡಾ 56ರಷ್ಟು ಪಾಲು, ಹಿಮಾಚಲ ಪ್ರದೇಶದ ಡಾಲ್ಹೌಸಿಯಲ್ಲಿರುವ 2016 ಚದರ ಅಡಿ ವಿಸ್ತೀರ್ಣದ ಸೂಪರ್ ಏರಿಯಾ, ಮನೆ, ಭೂಮಿಯಲ್ಲಿ ಪಾಲು ಹೊಂದಿದ್ದಾರೆ.

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ 1.06 ಕೋಟಿ ರೂಪಾಯಿ ಹೂಡಿಕೆ, 1,77,89,000 ರೂ.ಗಳ ಜಿಪಿಎಫ್​, 29,625 ರೂ.ಗಳ ಎಲ್​ಐಸಿ ಮನಿ ಬ್ಯಾಕ್ ಪಾಲಿಸಿ ವಾರ್ಷಿಕ ಪ್ರೀಮಿಯಂ ಮತ್ತು 14,000 ರೂ.ಗಳ ಷೇರುಗಳಿವೆ. ಚರಾಸ್ತಿಗಳ ಪೈಕಿ ಖನ್ನಾ ಅವರು, 250 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಮತ್ತು 2015 ರಲ್ಲಿ ಉಡುಗೊರೆಯಾಗಿ ಬಂದ ಮಾರುತಿ ಸ್ವಿಫ್ಟ್ ಕಾರನ್ನು ಹೊಂದಿದ್ದಾರೆ ಎಂಬುದು ದತ್ತಾಂಶದಲ್ಲಿದೆ.

ಮೇ 14ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಗವಾಯಿ ಅವರು 5.25 ಲಕ್ಷ ರೂ.ಗಳ ಚಿನ್ನಾಭರಣ ಸೇರಿ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಬಳಿ 29.70 ಲಕ್ಷ ರೂ.ಗಳ ಆಭರಣ ಮತ್ತು 61,320 ರೂ.ಗಳ ನಗದು ಠೇವಣಿ ಇದೆ. ಸುಪ್ರೀಂ ಕೋರ್ಟ್​ನ 33 ನ್ಯಾಯಾಧೀಶರಲ್ಲಿ 21 ಮಂದಿ ತಮ್ಮ ಆಸ್ತಿಯ ವಿವರಗಳನ್ನು ಘೋಷಿಸಿಕೊಂಡಿದ್ದಾರೆ. ಇನ್ನುಳಿದ ನ್ಯಾಯಮೂರ್ತಿಗಳ ಆಸ್ತಿ ಮಾಹಿತಿಯನ್ನು ಕಲೆ ಹಾಕಿದ ಬಳಿಕ, ಅವನ್ನೂ ವೆಬ್​ಸೈಟ್​​ನಲ್ಲಿ ಅಪ್​​ಲೋಡ್​ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

 

Category
ಕರಾವಳಿ ತರಂಗಿಣಿ