image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಹಲ್ಗಾಮ್​ ದಾಳಿಕೋರರನ್ನು ಶಿಕ್ಷೆಗೆ ಗುರಿಪಡಿಸಿ, ನಾವು ನಿಮ್ಮೊಂದಿಗೆ ಇದ್ದೇವೆ - ರಷ್ಯಾ ಅಧ್ಯಕ್ಷ ಪುಟಿನ್

ಪಹಲ್ಗಾಮ್​ ದಾಳಿಕೋರರನ್ನು ಶಿಕ್ಷೆಗೆ ಗುರಿಪಡಿಸಿ, ನಾವು ನಿಮ್ಮೊಂದಿಗೆ ಇದ್ದೇವೆ - ರಷ್ಯಾ ಅಧ್ಯಕ್ಷ ಪುಟಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ದೂರವಾಣಿ ಕರೆ ಮಾಡಿ, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ, ಪಹಲ್ಗಾಮ್ ಉಗ್ರ ದಾಳಿಕೋರರಿಗೆ ಮಣ್ಣುಮುಕ್ಕಿಸಿ ಎಂದು ಹೇಳಿದ್ದಾರೆ. ಮೋದಿ ಅವರೊಂದಿಗಿನ ಸಂಭಾಷಣೆಯಲ್ಲಿ ಪುಟಿನ್ ಅವರು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು. ಅಮಾಯಕರ ಹತ್ಯಾಕಾಂಡಕ್ಕೆ ಸಂತಾಪ ಸೂಚಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಪಹಲ್ಗಾಮ್ ಹತ್ಯಾಕಾಂಡ ನಡೆಸಿದ ಉಗ್ರರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇದರ ವಿರುದ್ಧದ ಹೋರಾಟದಲ್ಲಿ ರಷ್ಯಾ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪುಟಿನ್​ ಘೋಷಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ರಷ್ಯಾದ 'ವಿಕ್ಟರಿ ಡೇ' 80 ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಪುಟಿನ್ ಅವರಿಗೆ ಶುಭಾಶಯ ತಿಳಿಸಿದರು. ಭಯೋತ್ಪಾದಕ ದಾಳಿಯನ್ನು ಅನಾಗರಿಕ ಎಂದು ಟೀಕಿಸಿರುವ ಪುಟಿನ್, ಭಯೋತ್ಪಾದನೆಯ ವಿರುದ್ಧ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಉಗ್ರರ ಶಕ್ತಿಯನ್ನು ಬೇರು ಸಮೇತ ಕಿತ್ತುಹಾಕಬೇಕು ಎಂದು ಉಭಯ ನಾಯಕರು ಮಾತುಕತೆ ನಡೆಸಿದ್ದಾಗಿ ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.

ವಾರ್ಷಿಕ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆಹ್ವಾನ ನೀಡಿದರು. ಇದನ್ನು ಪುಟಿನ್​ ಅವರು ಸ್ವೀಕರಿಸಿದ್ದಾರೆ ಎಂದು ರಷ್ಯಾ ತಿಳಿಸಿದೆ. "ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವಂತೆ ರಷ್ಯಾದ ಅಧ್ಯಕ್ಷರಿಗೆ ಭಾರತ ಆಹ್ವಾನಿಸಿದೆ. ಆಹ್ವಾನವನ್ನು ಕೃತಜ್ಞತೆಯಿಂದ ಸ್ವೀಕರಿಸಲಾಗಿದೆ" ಎಂದು ಕ್ರೆಮ್ಲಿನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Category
ಕರಾವಳಿ ತರಂಗಿಣಿ