image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೈತ ನಾಯಕ ಜಗಜಿತ್​ ಸಿಂಗ್ ದಲ್ಲೆವಾಲ್‌ ಗೆ ಪೊಲೀಸರ ಗೃಹಬಂಧನ

ರೈತ ನಾಯಕ ಜಗಜಿತ್​ ಸಿಂಗ್ ದಲ್ಲೆವಾಲ್‌ ಗೆ ಪೊಲೀಸರ ಗೃಹಬಂಧನ

ಚಂಡೀಗಢ: ರೈತರ ಮೇಲಿನ ಪೊಲೀಸರ ದುರ್ವರ್ತನೆ ಖಂಡಿಸಿ ಮೇ 6ರಂದು ಶಂಭು ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕುವ ಕುರಿತು ರೈತ ನಾಯಕ ಜಗಜಿತ್​ ಸಿಂಗ್ ದಲ್ಲೆವಾಲ್ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಿರಿಯ ದಲ್ಲೇವಾಲ್ ಹೇಳಿಕೆ ಪ್ರಕಟಿಸಿದ್ದು, ಪಂಜಾಬ್​ ಪೊಲೀಸರು ತಮ್ಮನ್ನು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಮೇಲೆ ಮಧ್ಯರಾತ್ರಿ ನಡೆದ ದಾಳಿ ಇದು. ನನ್ನಲ್ಲಿ ಕೇವಲ ನಡೆಯುವಷ್ಟು ಶಕ್ತಿ ಮಾತ್ರ ಉಳಿದಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಆದರೂ ಕೂಡ ಪೊಲೀಸರು ನನ್ನನ್ನು ಮನೆಯಲ್ಲಿ ಇರಿಸಿದ್ದಾರೆ. ನಾವು ಶಂಭು ಪೊಲೀಸ್​ ಠಾಣೆಯ ಹೊರಗೆ ಒಂದು ದಿನ ಶಾಂತಿಯುತ ಪ್ರತಿಭಟನೆಯ ಘೋಷಣೆ ಮಾಡಿದ್ದೇವೆ. ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ನಾವು ಈ ಬಗ್ಗೆ ಎದ್ದು ನಿಂತು ಮಾತನಾಡಬೇಕಿದೆ ಎಂದು ಮನವಿ ಮಾಡಿದ್ದಾರೆ.

ಶಂಭು ಮತ್ತು ಕನೌರಿಯಲ್ಲಿ ಪ್ರತಿಭಟನೆಯ ವೇಳೆ ರೈತರ ಸಾಮಾಗ್ರಿ ಕಳವು ಮಾಡಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ. ಎಫ್​ಐಆರ್​ ದಾಖಲಿಸಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೇವೆ. ಆದರೆ, ಇದು ಆಗುತ್ತಿಲ್ಲ. ಪಟಿಯಾಲಾದಲ್ಲಿ ಕೆಲವು ಸ್ಥಳಗಳಲ್ಲಿ, ನಾಯಕರು, ಅವರ ಆಪ್ತರು ಮತ್ತು ಪೊಲೀಸ್ ಸಿಬ್ಬಂದಿ ನಮ್ಮ ಟ್ರಾಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಂತಹ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸರಕುಗಳನ್ನು ಹಿಂದಿರುಗಿಸಿದವರ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳುವಾದ ಆಸ್ತಿಗಳಿಗೆ ಪರಿಹಾರ ನೀಡುವುದಾಗಿ ಡಿಜಿಪಿ ಭರವಸೆ ನೀಡಿದ್ದರೂ, ಸರ್ಕಾರ ಮಾತಿನಿಂದ ಹಿಂದೆ ಸರಿಯುತ್ತಿದೆ. ಧರಣಿಯ ವೇಳೆ ರೈತರು ಮತ್ತು ಜನರ ವಿರುದ್ಧ ದುರ್ವರ್ತನೆ ತೋರಿದ ಎಸ್‌ಎಚ್‌ಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಧರಣಿ ವೇಳೆ ಜನರು ಮತ್ತು ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮವಾಗಬೇಕು ಎಂದು ಒತ್ತಾಯಿಸಿದ ರೈತರು, ಇದನ್ನು ಖಂಡಿಸಿ ಪ್ರತಿಭಟಿಸಲು ರೈತರು ಮೇ 6ರಂದು ಪೊಲೀಸ್ ಠಾಣೆಯ ಸುತ್ತಲೂ ಸಭೆ ಸೇರುವುದಾಗಿ ಘೋಷಿಸಿದ್ದರು.

ನಾವು ಏಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬುದನ್ನು ಸರ್ಕಾರ ತಿಳಿಯಬೇಕು. ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಆದರೆ, ಪ್ರತಿಭಟನೆಗೆ ಅವಕಾಶ ನೀಡದಿರುವುದರಿಂದ ನಮಗೆ ನ್ಯಾಯ ಸಿಗುತ್ತದೆಯೇ? ಧರಣಿ ಸಮಯದಲ್ಲಿ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮತ್ತು ರೈತರಿಗೆ ಪರಿಹಾರ ನೀಡುವ ಡಿಜಿಪಿ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ