image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಿರಡಿ ಸಾಯಿಬಾಬಾ ಮಂದಿರ ಸ್ಫೋಟ ಮಾಡುವುದಾಗಿ ಸಾಯಿ ಸಂಸ್ಥಾನಕ್ಕೆ ಇಮೇಲ್ ಬೆದರಿಕೆ

ಶಿರಡಿ ಸಾಯಿಬಾಬಾ ಮಂದಿರ ಸ್ಫೋಟ ಮಾಡುವುದಾಗಿ ಸಾಯಿ ಸಂಸ್ಥಾನಕ್ಕೆ ಇಮೇಲ್ ಬೆದರಿಕೆ

ಮಹಾರಾಷ್ಟ್ರ: ಪೈಪ್ ಬಾಂಬ್ ಇಟ್ಟು ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರವನ್ನು ಸ್ಫೋಟಿಸುವುದಾಗಿ ಶುಕ್ರವಾರ (ಮೇ 2) ಸಾಯಿ ಸಂಸ್ಥಾನಕ್ಕೆ ಇಮೇಲ್ ಮೂಲಕ ಬೆದರಿಕೆ ಬಂದಿದೆ. ಆದರೆ ಅದು ಹುಸಿ ಬಾಂಬ್​ ಬೆದರಿಕೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಇಮೇಲ್​ ಹಿನ್ನೆಲೆಯಲ್ಲಿ ಶಿರಡಿಯಲ್ಲಿ ಭೀತಿ ಆವರಿಸಿತ್ತು. ಸಾಯಿ ಸಂಸ್ಥಾನ ಮತ್ತು ಸ್ಥಳೀಯ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ವರದಿಗಳ ಪ್ರಕಾರ, ಶಿರಡಿ ಸಾಯಿ ಸಂಸ್ಥಾನವು ಅಜಿತ್ ಜಕ್ಕುಮೊಲ್ಲಾ ಎಂಬವರಿಂದ ಇಮೇಲ್ ಅನ್ನು ಸ್ವೀಕರಿಸಿದೆ. ಅದರ ಐಪಿಯನ್ನು ಟ್ರ್ಯಾಕ್ ಮಾಡಿದಾಗ, ಕರ್ನಾಟಕದಿಂದ ಇಮೇಲ್ ಕಳುಹಿಸಿರುವುದಾಗಿ ತಿಳಿದುಬಂದಿದೆ.

ಪೈಪ್ ಬಾಂಬ್ ದಾಳಿಯ ಬಗ್ಗೆ ಇಮೇಲ್ ಎಚ್ಚರಿಕೆ ನೀಡಿ "ಮೊದಲು ಪಹಲ್ಗಾಮ್, ಮುಂದೆ ಶಿರಡಿ" ಎಂದು ಉಲ್ಲೇಖಿಸಲಾಗಿತ್ತು. ತಮಿಳುನಾಡಿನ ಜಾಫರ್ ಸಾದಿಕ್ ಮತ್ತು ಜಾಫರ್ ಸಯೀದ್ ಎಂಬವರನ್ನು ಪ್ರಕರಣವೊಂದರಲ್ಲಿ ಖುಲಾಸೆಗೊಳಿಸುವಂತೆ ಇಮೇಲ್‌ನಲ್ಲಿ ಒತ್ತಾಯಿಸಲಾಗಿತ್ತು.

ಬೆದರಿಕೆ ಇಮೇಲ್ ಬಗ್ಗೆ ಸಾಯಿ ಸಂಸ್ಥಾನ ಆಡಳಿತದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 351(4) ಅಡಿಯಲ್ಲಿ ಶಿರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಜೊತೆಗೆ, ಸಾಯಿ ಸಂಸ್ಥಾನದ ಭದ್ರತೆಗೆ ಮಹಾರಾಷ್ಟ್ರ ಪೊಲೀಸರು ಹಾಗೂ ಎಂಎಸ್‌ಎಫ್​ನಿಂದ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಸಂಸ್ಥಾನ ಸ್ಪಷ್ಟಪಡಿಸಿದೆ.

ಸಂಸ್ಥಾನವು (ಟ್ರಸ್ಟ್) ತನ್ನದೇ ಆದ ಭದ್ರತಾ ಸಿಬ್ಬಂದಿಯನ್ನು ಹೊಂದಿದೆ. ಇಮೇಲ್ ಬಂದ ಬಳಿಕ ನಮ್ಮ ಸಿಬ್ಬಂದಿ ಪೊಲೀಸ್ ತಂಡಗಳೊಂದಿಗೆ ಸೇರಿಕೊಂಡು ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ" ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಸಿಇಒ ಗೋರಕ್ಷಾ ಗಡಿಲ್ಕರ್ ತಿಳಿಸಿದ್ದಾರೆ.

ಸಾಯಿ ಸಂಸ್ಥಾನಕ್ಕೆ ಬೆದರಿಕೆ ಸಂದೇಶಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಹುಸಿ ಬೆದರಿಕೆಗಳು ಅನೇಕ ಸಲ ಬಂದಿವೆ. ಆದಾಗ್ಯೂ, ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಇಡೀ ದೇಶದಲ್ಲಿ ಉದ್ವಿಗ್ನವಾಗಿರುವ ಸಮಯದಲ್ಲಿ ಈ ಇಮೇಲ್ ಬಂದಿರುವುದು ಜನರಲ್ಲಿ ಭೀತಿ ಮೂಡಿಸಿತ್ತು.

ಇದೊಂದು ಹುಸಿ ಬಾಂಬ್​ ಬೆದರಿಕೆ ಎಂಬುದು ತಿಳಿದುಬಂದರೂ ಕೂಡ, ಸಂಭವನೀಯ ಬೆದರಿಕೆ ತಪ್ಪಿಸಲು ಪೊಲೀಸರು ಮತ್ತು ದೇವಾಲಯದ ಆಡಳಿತದಿಂದ ಭದ್ರತೆ ಹೆಚ್ಚಿಸಿ ಕ್ರಮ ವಹಿಸಲಾಗಿದೆ.

Category
ಕರಾವಳಿ ತರಂಗಿಣಿ