ಶ್ರೀಲಂಕಾ : ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಶಂಕಿತ ಉಗ್ರನೊಬ್ಬ ಚೆನ್ನೈನಿಂದ ಶ್ರೀಲಂಕಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿದ್ದಾನೆ ಎಂಬ ಮಾಹಿತಿಯ ಮೇರೆಗೆ ಇಡೀ ವಿಮಾನವನ್ನು ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕಾ ಏರ್‌ಲೈನ್ಸ್‌ನ ಹೇಳಿಕೆಯ ಪ್ರಕಾರ, ತನ್ನ ವಿಮಾನವು ಬೆಳಗ್ಗೆ 11:59 ಕ್ಕೆ ಚೆನ್ನೈನಿಂದ ಕೊಲಂಬೊದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಈ ವೇಳೆ ಭಾರತದ ಕೋರಿಕೆಯ ಮೇರೆಗೆ ಉಗ್ರ ಇರುವ ಮಾಹಿತಿಯಂತೆ ಭದ್ರತಾ ಪಡೆಗಳು ತಪಾಸಣೆ ನಡೆಸಿದವು ಎಂದು ತಿಳಿಸಿದೆ.
"ಭಾರತದಲ್ಲಿ ಬೇಕಾಗಿರುವ ಶಂಕಿತನೊಬ್ಬ ವಿಮಾನದಲ್ಲಿದ್ದಾನೆ ಎಂದು ಚೆನ್ನೈ ವಿಮಾನ ನಿಲ್ದಾಣದಿಂದ ಬಂದ ಮಾಹಿತಿಯ ನಂತರ ಸ್ಥಳೀಯ ಅಧಿಕಾರಿಗಳ ಜೊತೆ ಸೇರಿ ಭಾರತೀಯ ಅಧಿಕಾರಿಗಳು ಶೋಧ ನಡೆಸಿದರು. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಶಂಕಿತ ಉಗ್ರ ಪತ್ತೆಯಾಗದ ಕಾರಣ, ವಿಮಾನದ ಮುಂದಿನ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಭದ್ರತಾ ವೈಫಲ್ಯ ಮತ್ತು ಜೀವ ಹಾನಿಗೆ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ದಾಳಿಯ ನಂತರ ಭದ್ರತಾ ಪಡೆಗಳು ಐವರು ಭಯೋತ್ಪಾದಕರನ್ನು ಗುರುತಿಸಿದ್ದಾರೆ. ಅದರಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ.
ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಭಯೋತ್ಪಾದಕರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರನ್ನು ಅವರ ಕಲ್ಪನೆಗೂ ಮೀರಿದ ಶಿಕ್ಷೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಆಯುಧದಾರಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿದ್ದು, ಭಾರತದ ಆತ್ಮದ ಮೇಲೆ ದಾಳಿ ಮಾಡಿದಂತೆ, ಇದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಹೇಳಿದ್ದಾರೆ.