ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಭಾರತ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಈ ನಡುವೆ ಎರಡು ದೇಶದ ಪರಿಸ್ಥಿತಿ ಗಮನಿಸಿ ಮಾತನಾಡಿರುವ ಯುರೋಪಿಯನ್ ಒಕ್ಕೂಟ, ಭಾರತ ಮತ್ತು ಪಾಕ್ ಸಂಯಮ ಪ್ರದರ್ಶಿಸಿ ಮಾತುಕತೆ ನಡೆಸುವಂತೆ ಕರೆ ನೀಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಜೊತೆಗೆ ಪ್ರತ್ಯೇಕವಾಗಿ ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಉನ್ನತ ಪ್ರತಿನಿಧಿ ಕಾಜಾ ಕಲ್ಲಾಸ್ ಅವರು ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಎರಡು ದೇಶಗಳ ನಡುವಿನ ಉದ್ವಿಗ್ನತೆ ಆತಂಕಕಾರಿಯಾಗಿದ್ದು, ಈ ಪರಿಸ್ಥಿತಿ ಉಲ್ಬಣಗೊಳ್ಳುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಎರಡು ದೇಶಗಳು ಮಾತುಕತೆ ಮೂಲಕ ಪರಿಸ್ಥಿತಿ ನಿಭಾಯಿಸಬೇಕು. ಉದ್ವಿಗ್ನತೆ ಹೆಚ್ಚುವುದರಿಂದ ಯಾರಿಗೂ ಸಹಾಯವಾಗುವುದಿಲ್ಲ. ಜೈಶಂಕರ್ ಹಾಗೂ ಇಶಾಕ್ ದಾರ್ ಗೆ ತಮ್ಮ ಸಂದೇಶ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಯುರೋಪಿಯನ್ ಒಕ್ಕೂಟದಿಂದ ಪಹಲ್ಗಾಮ್ ಉಗ್ರರ ದಾಳಿಗೆ ವ್ಯಕ್ತವಾದ ಬಲವಾದ ಖಂಡನೆಯನ್ನು ಸ್ವಾಗತಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, ಯುರೋಪಿಯನ್ ಒಕ್ಕೂಟದ ಎಚ್ಆರ್ವಿಪಿ ಕಾಜಾ ಕಲ್ಲಾಸ್ ಜೊತೆಗೆ ಸಂಜೆ ಪಹಲ್ಗಾಮ್ ದಾಳಿ ಕುರಿತು ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತ ಉದ್ವಿಗ್ನತೆಯನ್ನು ತಗ್ಗಿಸಲು ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ಕೆಲಸ ಮಾಡಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒತ್ತಾಯಿಸಿದ್ದರು. ಇದೀಗ ಯುರೋಪಿಯನ್ ಒಕ್ಕೂಟವು ಭಾರತ ಮತ್ತು ಪಾಕಿಸ್ತಾನಕ್ಕೆ ಸಂಯಮದಿಂದ ಇರುವಂತೆ ಕರೆ ನೀಡಿದೆ.
ಈ ದಾಳಿಗೆ ಗಡಿಯಾಚೆಗಿನ ಸಂಬಂಧ ಇದೆ ಎಂದು ಭಾರತ ಉಲ್ಲೇಖಿಸಿದ್ದು, ಈ ದಾಳಿಯಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಉನ್ನತ ರಕ್ಷಣಾ ಅಧಿಕಾರಿಗಳೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಗೆ ಬಲವಾದ ಹೊಡೆತ ನೀಡುವುದು ರಾಷ್ಟ್ರೀಯ ಸಂಕಲ್ಪ, ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ತಮಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿರುವುದಾಗಿ ತಿಳಿಸಿದ್ದರು. ಜೊತೆಗೆ ಯಾವುದೇ ಕಾರ್ಯಾಚರಣೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದಾಗಿ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.