ಮಣಿಪುರ: ರಾಷ್ಟ್ರಪತಿ ಆಳ್ವಿಕೆಯಲ್ಲಿರುವ(president rule) ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮರು ಸ್ಥಾಪನೆಯಾಗಲು ಉತ್ತಮ ಮತ್ತು ಬಲಿಷ್ಠ ಸರ್ಕಾರ ರಚಿಸುವಂತೆ 21 ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ(amith shah) ಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಇದರಿಂದ ಯಾವುದೇ ಮಹತ್ತರ ಬದಲಾವಣೆ ಆಗಿಲ್ಲ. ಶಾಂತಿ ಸಂಪೂರ್ಣವಾಗಿ ಸ್ಥಾಪನೆಯಾಗಿಲ್ಲ. ಹೀಗಾಗಿ, ಜನಪ್ರಿಯ ಸರ್ಕಾರ ರಚಿಸುವುದು ಅಗತ್ಯ ಎಂದು ಶಾಸಕರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಷ್ಟ್ರಪತಿ ಆಳ್ವಿಕೆಯ ಕಳೆದು ಮೂರು ತಿಂಗಳಲ್ಲಿ ನಿರೀಕ್ಷಿಸಲಾಗಿದ್ದು, ಯಾವುದೇ ಬದಲಾವಣೆಗಳು ಆಗಿಲ್ಲ. ಮತ್ತೆ ರಾಜ್ಯದಲ್ಲಿ ಹಿಂಸೆ ಭುಗಿಲೇಳುವ ಆತಂಕದಲ್ಲಿ ಜನರು ಇದ್ದಾರೆ. ರಾಷ್ಟ್ರಪತಿ ಆಳ್ವಿಕೆ ವಿರುದ್ಧ ಜನರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸಭೆಯ ಅಧಿಕಾರವಧಿ 2027ರವರೆಗೆ ಇರುವುದರಿಂದ ರಾಜ್ಯದಲ್ಲಿ ಬಲಿಷ್ಠ ಸರ್ಕಾರ ರಚಿಸುವಂತೆ ಕೋರಿ 13 ಬಿಜೆಪಿ ಶಾಸಕರು, ಎನ್ಪಿಪಿಯ 3, ನಾಗಾ ಪೀಪಲ್ಸ್ ಫ್ರಂಟ್ನ ಮೂವರು ಮತ್ತು ಇಬ್ಬರು ಸ್ವತಂತ್ರ ಸದಸ್ಯರು ಮನವಿ ಮಾಡಿದ್ದಾರೆ.
"ಮಣಿಪುರದಲ್ಲಿ ಶಾಂತಿ ಮರು ನೆಲೆಸಲು ಜನಪ್ರಿಯ(popular) ಸರ್ಕಾರವನ್ನು ರಚಿಸುವುದೊಂದೇ ಏಕೈಕ ಮಾರ್ಗ. ಜನರ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಸರ್ಕಾರ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಶಾಸಕರು ಗೃಹ ಸಚಿವರನ್ನು(home minister) ವಿನಂತಿಸಿದ್ದಾರೆ.
ರಾಜ್ಯದಲ್ಲಿ 2023ರಿಂದ ಮೈಥೇಯಿ ಮತ್ತು ಕುಕಿ ಗುಂಪುಗಳ ನಡುವೆ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಇಲ್ಲಿಯವರೆಗೆ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸರ್ಕಾರವು ಅಲ್ಲಿ ಫೆಬ್ರವರಿ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದೆ.