ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಜೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ 71 ಮಂದಿ ಗಣ್ಯರಿಗೆ 2025ನೇ ಸಾಲಿನ ಪ್ರತಿಷ್ಟಿತ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಪೈಕಿ ನಾಲ್ವರಿಗೆ ಪದ್ಮವಿಭೂಷಣ, 10 ಮಂದಿಗೆ ಪದ್ಮಭೂಷಣ ಹಾಗೂ 57 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಡಿ.ನಾಗೇಶ್ವರ್ ರೆಡ್ಡಿ, ಡಾ.ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ವೈದ್ಯಕೀಯ ಮತ್ತು ಕಲಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಕ್ರಮವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ಎಂ.ಟಿ.ವಾಸುದೇವನ್ ನಾಯರ್ ಮತ್ತು ಒಸಾಮು ಸುಜುಕಿ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದವರಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ, ಹಿರಿಯ ನಟ ಶೇಖರ್ ಕಪೂರ್, ಭಾರತೀಯ ಹಾಕಿ ತಂಡದ ಮಾಜಿ ನಾಯಕ ಶ್ರೀಜೇಶ್ ಪಿ.ಆರ್., ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ದಿ.ಸುಶೀಲ್ ಕುಮಾರ್ ಮೋದಿ ಸೇರಿದ್ದಾರೆ.
ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಮಾಜಿ ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಅಮೆರಿಕದ ಲೇಖಕ ಸ್ಟೀಫನ್ ನ್ಯಾಪ್, ರೋನು ಮಜುಂದಾರ್ ಮತ್ತು ಶಾಸ್ತ್ರೀಯ ಗಾಯಕರಾದ ಡಾ.ಕೆ.ಓಮನ್‌ಕುಟ್ಟಿ ಅಮ್ಮ, ಕರ್ನಾಟಕದ ಕೊಪ್ಪಳದ ತೊಗಲು ಗೊಂಬೆಯಾಟ ಹಿರಿಯ ಕಲಾವಿದೆ 96 ವರ್ಷದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಖ್ಯಾತ ವೇದ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್, ಕುವೈತ್‌ನ ಯೋಗ ಶಿಕ್ಷಣದ ಪ್ರವರ್ತಕಿ ಶೇಖಾ ಶೈಖಾ ಅಲಿ ಅಲ್-ಜಾಬರ್ ಅಲ್-ಸಬಾ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಮುಖರು.
ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಾಲಯ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಭೂಮಿ ಪೂಜೆ ಮತ್ತು ಪ್ರಾಣ ಪ್ರತಿಷ್ಠೆಗೆ ಶುಭಘಳಿಗೆ ನಿರ್ಧರಿಸಿದವರು.
ಪ್ರಶಸ್ತಿ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಕುವೈತ್‌ನ ಯೋಗ ಶಿಕ್ಷಣದ ಪ್ರವರ್ತಕಿ ಶೇಖಾ ಶೈಖಾ ಅಲಿ ಅಲ್-ಜಾಬರ್ ಅಲ್-ಸಬಾ, "ಪ್ರಶಸ್ತಿ ಪಡೆದಿರುವುದಕ್ಕೆ ನಾನು ತುಂಬಾ ಕೃತಜ್ಞಳಗಿದ್ದೇನೆ. ಭಾರತ ಸರ್ಕಾರಕ್ಕೆ ಧನ್ಯವಾದಗಳು. ನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಆಗಾಗ್ಗೆ ಇಲ್ಲಿಗೆ ಬರುತ್ತೇನೆ. ಹಾಗಾಗಿ, ನನಗಿದು ಮನೆಯಂತೆ ಭಾಸವಾಗುತ್ತಿದೆ. ನಾನು ಯೋಗದ ಕುರಿತು ನನ್ನ ದಿವಂಗತ ಅಜ್ಜನಿಂದ ಕಲಿತೆ. ಅವರು ಯೋಗ ಸಾಧಕರಾಗಿದ್ದರು. ಯೋಗದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ" ಎಂದರು.
ಕಲೆ, ಸಾಮಾಜಿಕ ಕಾರ್ಯಗಳು, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ವಿಭಾಗಗಳು ಮತ್ತು ಚಟುವಟಿಕೆಗಳ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಭಾರತ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ನೀಡುತ್ತದೆ. ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ದನ್ಕರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು ಮತ್ತು ಇತರ ಗಣ್ಯರಿದ್ದರು.