ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನವನ್ನು ಎಲ್ಲ ಕೋನಗಳಿಂದ ಅನುಮಾನಿಸುವಂತಾಗಿದೆ. ಆ ದೇಶದ ಯುವತಿಯರು ಭಾರತೀಯ ಯುವಕರನ್ನು ವಿವಾಹವಾಗಿದ್ದು, 'ಉಗ್ರವಾದದ ಹೊಸ ರೂಪ' ಎಂದು ಬಿಜೆಪಿ ಹಿರಿಯ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, "ಪಾಕಿಸ್ತಾನಿ ಭಯೋತ್ಪಾದನೆ ಹೊಸ ರೂಪ ಪಡೆದುಕೊಂಡಿದೆ. ಅಲ್ಲಿನ ಯುವತಿಯರು ನಮ್ಮ ಯುವಕರನ್ನು ವಿವಾಹವಾಗುವ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಅವರಿಗೆ ಪೌರತ್ವವಿಲ್ಲ. ಸುಮಾರು 5 ಲಕ್ಷ ಪಾಕ್ ಮಹಿಳೆಯರು ಭಾರತೀಯರನ್ನು ಮದುವೆಯಾಗಿದ್ದಾರೆ. ಅವರೆಲ್ಲರೂ ಇಲ್ಲಿ ವಾಸಿಸುತ್ತಿದ್ದಾರೆ. ದೇಶವನ್ನು ಪ್ರವೇಶಿಸಿರುವ ಶತ್ರುಗಳನ್ನು ಹೇಗೆ ಎದುರಿಸುವುದು" ಎಂದು ಅವರು ಪ್ರಶ್ನಿಸಿದ್ದಾರೆ.
"ಪಾಕಿಸ್ತಾನಿ ಹುಡುಗಿಯರು ಮದುವೆಯಾಗಿ ಇಲ್ಲಿಯೇ ಇದ್ದಾರೆ. ಅವರೆಲ್ಲರೂ ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಅವರು ಭಾರತೀಯ ನಾಗರಿಕರಲ್ಲ. ಪಾಕಿಸ್ತಾನಿ ಯುವಕರೂ ಕೂಡ ಇಲ್ಲಿನ ಯುವತಿಯರನ್ನು ಮದುವೆಯಾಗಿ ಇಲ್ಲಿಯೇ ಉಳಿದಿದ್ದಾರೆ. ಈ ವಿವಾಹಗಳ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಯಬೇಕಿದೆ. ಪಾಕಿಗಳಿಗೆ ಅಲ್ಲಿ ಹೆಣ್ಣು ಸಿಗುತ್ತಿಲ್ಲವೇ? 1947 ರ ವಿಭಜನೆಯ ಸಮಯದಲ್ಲಿ, ಪಾಕಿಸ್ತಾನಕ್ಕೆ ವಲಸೆ ಹೋದ ಭಾರತೀಯರ ಆಸ್ತಿಗಳನ್ನು 'ಶತ್ರು ಆಸ್ತಿ' ಎಂದು ಘೋಷಿಸಿ ಅಲ್ಲಿನ ಸರ್ಕಾರ ವಶಪಡಿಸಿಕೊಂಡಿತ್ತು. ಈಗ ಪಾಕಿಸ್ತಾನ ಮತ್ತು ಭಾರತದವರು ಪರಸ್ಪರ ವಿವಾಹವಾಗುತ್ತಿದ್ದಾರೆ. ಇದು ಶತೃತ್ವದ ವಿವಾಹಗಳಲ್ಲವೇ?" ಎಂದು ಬಿಜೆಪಿ ಸಂಸದ ಕೇಳಿದ್ದಾರೆ.
ಭಾನುವಾರ ಜಾರ್ಖಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ದುಬೆ, 2025 ರ ಅಂತ್ಯದ ವೇಳೆಗೆ ಪಾಕಿಸ್ತಾನವು ಅಸ್ತಿತ್ವದಲ್ಲಿ ಇರುವುದಿಲ್ಲ. ಅದು ನಾಲ್ಕು ಭಾಗಗಳಾಗಿ ವಿಭಜನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು.
ಆಕ್ರಮಿತ ಕಾಶ್ಮೀರವನ್ನು ಭಾರತ ಮರಳಿ ಪಡೆಯಲಿದೆ. ಇದರ ಜೊತೆಗೆ, ಬಲೂಚಿಸ್ತಾನ್, ಪಂಕ್ತೂನಿಸ್ತಾನ್ ಮತ್ತು ಪಂಜಾಬ್ ಎಂದು ಹೋಳಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿಯ ಅವರ ಹೊಸ ಗ್ಯಾರಂಟಿ ಎಂದು ಅವರು ಹೇಳಿದ್ದರು.
ಕಳೆದ ನಾಲ್ಕು ದಿನಗಳಲ್ಲಿ ಸುಮಾರು 537 ಪಾಕಿಸ್ತಾನಿಗಳು ಅಟ್ಟಾರಿ-ವಾಘಾ ಗಡಿ ದಾಟಿದ್ದಾರೆ. ಅವರಲ್ಲಿ 9 ಮಂದಿ ರಾಜತಾಂತ್ರಿಕರು ಮತ್ತು ಅಧಿಕಾರಿಗಳೂ ಸೇರಿದ್ದಾರೆ. ಮತ್ತೊಂದೆಡೆ, 14 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 850 ಭಾರತೀಯರು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ. ಆದೇಶ ಉಲ್ಲಂಘಿಸಿ ಭಾರತದಲ್ಲೇ ಉಳಿದ ಪಾಕಿಗಳನ್ನು ಬಂಧಿಸಿ, ಮೂರು ವರ್ಷ ಜೈಲು ಶಿಕ್ಷೆ ಅಥವಾ 3 ಲಕ್ಷ ರೂ.ಗಳ ದಂಡ ವಿಧಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.