ನೋಯ್ಡಾ : ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ಭದ್ರತಾ ಸಂಸ್ಥೆಗಳ ಸೂಚನೆಗಳ ಪ್ರಕಾರ, ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೆಂಪು ವಲಯವೆಂದು ಘೋಷಿಸಲಾಗಿದೆ. ಹೀಗಾಗಿ, ಇಲ್ಲಿನ ವಿಮಾನ ನಿಲ್ದಾಣದ ಮೇಲೆ ಮತ್ತು ಸುತ್ತಮುತ್ತ ಡ್ರೋನ್‌ಗಳು ಅಥವಾ ಯಾವುದೇ ರೀತಿಯ ಮಾನವರಹಿತ ವೈಮಾನಿಕ ವಾಹನ (UAV) ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಿಮಾನ ನಿಲ್ದಾಣದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶಗಳು ಮತ್ತು ಸೂಚನೆಗಳನ್ನು ಹೊರಡಿಸಲಾಗಿದೆ ಎಂದು ಜೇವರ್ ವಿಮಾನ ನಿಲ್ದಾಣದ ಎಡಿಸಿಪಿ ಮನೀಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಪ್ರತಿಯೊಬ್ಬರೂ ಅವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭದ್ರತಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಅನುಮತಿಯಿಲ್ಲದೆ ಡ್ರೋನ್ ಹಾರಿಸುವುದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆ, 1934 ಮತ್ತು ಯುಎವಿ ಕಾರ್ಯಾಚರಣೆಯ ನಿಯಮಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ.
ನೋಯ್ಡಾ ವಿಮಾನ ನಿಲ್ದಾಣ ಪ್ರದೇಶವನ್ನು ಅಕ್ಟೋಬರ್ 8 ರಂದು ಕೆಂಪು ವಲಯ ಎಂದು ಘೋಷಿಸಲಾಗಿದೆ. ಆದರೆ ಇದೀಗ ಅಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸುವಂತೆ ಮತ್ತು ಸಹಕರಿಸುವಂತೆ ಮನವಿ ಮಾಡುವ ವಿಡಿಯೋ ಸಂದೇಶವನ್ನು ಪೊಲೀಸರು ಸಹ ಬಿಡುಗಡೆ ಮಾಡಿದ್ದಾರೆ.