image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶಕ್ಕೆ ಸಂಪರ್ಕ ಕಲ್ಪಿಸುವ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಏಕಮುಖ ಸಂಚಾರಕ್ಕೆ ಅವಕಾಶ

ದೇಶಕ್ಕೆ ಸಂಪರ್ಕ ಕಲ್ಪಿಸುವ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಏಕಮುಖ ಸಂಚಾರಕ್ಕೆ ಅವಕಾಶ

ರಾಂಬನ್​: ದೇಶಕ್ಕೆ ಸಂಪರ್ಕ ಕಲ್ಪಿಸುವ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಸಾಗಿದ್ದು, ಏಕಮುಖ ಸಂಚಾರಕ್ಕೆ ಇದೀಗ ಅವಕಾಶ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಜಿಲ್ಲೆಯಲ್ಲಿ ಏಪ್ರಿಲ್​ 20ರಂದು ಉಂಟಾದ ಮೇಘಸ್ಫೋಟದ ಪರಿಣಾಮ ಭಾರೀ ಮಳೆ- ಭೂ ಕುಸಿತದಿಂದ ರಾಜ್ಯದ ಪ್ರಮುಖ ರಸ್ತೆ ಸಂಚಾರ ಮಾರ್ಗ ಸಂಪರ್ಕ ಕಡಿತಗೊಂಡಿತ್ತು. ಇದೀಗ ಈ ಪ್ರವಾಸಿ ಮಾರ್ಗದ ದುರಸ್ತಿ ಕಾರ್ಯ ಸಾಗಿದ್ದು, ಅಧಿಕಾರಿಗಳು ಜಮ್ಮುವಿನಿಂದ ಶ್ರೀನಗರಕ್ಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.

ಕಣಿವೆ ನಾಡಿನಿಂದ ದೇಶದ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದಾಗಿದ್ದು, ಬಂದ್​ ಆಗಿದೆ. ನೂರಾರು ವಾಹನಗಳು ಸಂಚಾರ ಸ್ಥಗಿತಗೊಳಿಸಿವೆ. 250 ಕಿ.ಮೀ ಉದ್ದದ ಜಮ್ಮು- ಶ್ರೀನಗರ ಹೆದ್ದಾರಿಯನ್ನು ದುರಸ್ತಿಗೊಳಿಸಿ, ಪುನರ್‌ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇಂದು ರಾಂಬನ್​ಗೆ ಭೇಟಿ ನೀಡಲಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್​ ಅಬ್ಧುಲ್ಲಾ, ಹೆದ್ದಾರಿ ಮತ್ತು ಇತರ ಮೂಲಸೌಕರ್ಯಗಳ ಸಂಪೂರ್ಣ ಪುನರ್​ ಸ್ಥಾಪನೆ ಕಾರ್ಯದ ಪ್ರಗತಿಯನ್ನು ಪರಿಶೀಲನೆ ನಡೆಸಲಿದ್ದಾರೆ.

ಸಂಪೂರ್ಣ ಅವಶೇಷಗಳಿಂದ ಮುಳುಗಿ ಹೋಗಿದ್ದ ರಸ್ತೆಯನ್ನು ಇದೀಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ರಸ್ತೆ ಮಾರ್ಗ ಬಂದ್​ ಆಗಿದ್ದ ಪರಿಣಾಮ ಅನೇಕ ವಾಹನಗಳು ಬೇರೆ ಮಾರ್ಗದ ಪರ್ಯಾಯ ಸಂಪರ್ಕವಿಲ್ಲದೇ ಸಂಚಾರ ಸ್ಥಗಿತಗೊಳಿಸಿದ್ದವು. ಎನ್​ಹೆಚ್​ 44 ಸಂಚಾರ ಬಂದ್​ ಮಾಡಿ, ರಸ್ತೆ ಮೇಲೆ ಬಿದ್ದಿರುವ ಅವಶೇಷಗಳ ತೆಗೆದು ಹಾಕುವ ಪ್ರಯತ್ನ ಸಾಗಿದ್ದು, ನೆಲದಡಿ ಮರಳು ಮತ್ತು ಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವುಗಳ ತೆರವು ಸವಾಲಾಗಿತ್ತು.

ಈ ಸ್ಥಳದಲ್ಲಿ ಉಂಟಾದ ತೀವ್ರ ಹಾನಿಯಿಂದಾಗಿ ಸಾವಿರಾರು ಪ್ರಯಾಣಿಕರು ಕೂಡ ಅನೇಕ ಸ್ಥಳದಲ್ಲಿ ಸಿಲುಕುವಂತೆ ಆಗಿತ್ತು. ಪ್ರಮುಖ ಸಂಚಾರ ಹೆದ್ದಾರಿ ಮಾರ್ಗ ಬಂದ್​ ಆದ ಪರಿಣಾಮ ಪ್ರವಾಸ ಸೇರಿದಂತೆ ಸರಕು- ಸಾಗಣೆಯಲ್ಲಿ ಕೂಡ ತೀವ್ರ ತೊಂದರೆ ಉಂಟಾಗಿದೆ. ಇದೀಗ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಪ್ರವಾಸಿಗರು ಹೈರಾಣಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ವಾಹನಗಳ ಸಂಚಾರವನ್ನು ಹಂತ ಹಂತವಾಗಿ ನಿರ್ವಹಿಸುತ್ತಿದ್ದರಿಂದ ಟ್ರಾಫಿಕ್​ ದಟ್ಟಣೆ ಸಮಸ್ಯೆಯಾಗಿದೆ. ಶೀಘ್ರದಲ್ಲೇ ದುರಸ್ತಿ ಕಾರ್ಯ ಪೂರ್ಣಗೊಳಿಸಿ, ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ