image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ ಮತ್ತು ಪಾಕಿಸ್ತಾನ ನಡುವೆ ಮೂಡಿರುವ ಉದ್ವಿಗ್ನತೆ ಶಮನಗೊಳಿಸಲು ಇರಾನ್ ನಿಂದ ಪ್ರಯತ್ನ...!

ಭಾರತ ಮತ್ತು ಪಾಕಿಸ್ತಾನ ನಡುವೆ ಮೂಡಿರುವ ಉದ್ವಿಗ್ನತೆ ಶಮನಗೊಳಿಸಲು ಇರಾನ್ ನಿಂದ ಪ್ರಯತ್ನ...!

ನವದೆಹಲಿ: ಪಹಲ್ಗಾಮ್​ ಉಗ್ರರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಉದ್ವಿಗ್ನಗೊಂಡಿದೆ. ಈ ಎರಡು ದೇಶಗಳ ನಡುವೆ ಮೂಡಿರುವ ಈ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇರಾನ್​ ಮುಂದಾಗಿದೆ.

ಭಾರತ ಮತ್ತು ಪಾಕ್ ನಡುವೆ ಉಂಟಾಗಿರುವ ಈ ಹಗೆತನದ ಬಗ್ಗೆ ಸೌದಿ ಅರೇಬಿಯಾ ಕೂಡ ಕಳವಳ ವ್ಯಕ್ತಪಡಿಸಿದೆ. ಅಂತೆಯೇ ಸೌದಿ ಅರೇಬಿಯಾ ವಿದೇಶಾಂಗ ಸಚಿವರು ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದಾರೆ.

ಭಾರತ ಮತ್ತು ಪಾಕ್ ನೆರೆಯ ದೇಶಗಳಾಗಿದ್ದು, ಶತಮಾನಗಳ ಸಾಂಸ್ಕೃತಿ ನಾಗರಿಕ ಸಂಬಂಧಗಳನ್ನು ಆಹ್ಲಾದಿಸುತ್ತಾ ಬರುತ್ತಿವೆ. ಇತರೆ ನೆರೆಹೊರೆಯವರಂತೆ, ನಾವು ಅವರನ್ನು ನಮ್ಮ ಪ್ರಮುಖ ಆದ್ಯತೆ ಎಂದು ಪರಿಗಣಿಸುತ್ತೇವೆ ಎಂದು ಇರಾನ್​ ವಿದೇಶಾಂಗ ಸಚಿವ ಸಯ್ಯದ್​ ಅಬ್ಬಾಸ್​​ ಅರಘ್ವಿ ತಿಳಿಸಿದ್ದಾರೆ.

ಕಷ್ಟದ ಸಮಯದಲ್ಲಿ ತಿಳುವಳಿಕೆಯನ್ನು ರೂಪಿಸಲು ಇಸ್ಲಾಮಾಬಾದ್ ಮತ್ತು ನವದೆಹಲಿಯಲ್ಲಿರುವ ತಮ್ಮ ಕಚೇರಿಗಳನ್ನು ಬಳಸಲು ಟೆಹ್ರಾನ್ ಸಿದ್ಧವಾಗಿದೆ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯ ನಡುವೆ, ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಎಸ್​ ಜೈಶಂಕರ್​ ಕೂಡ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಪಹಲ್ಗಾಮ್​ ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ, ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಅಟ್ಟಾರಿ ಗಡಿಯಲ್ಲಿ ಬಂದ್​​ ಮತ್ತು ರಾಜತಾಂತ್ರಿಕ ಸಂಬಂಧಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಗುರುವಾರ ತನ್ನ ವಾಯು ಮಾರ್ಗವನ್ನು ಭಾರತಕ್ಕೆ ಮುಚ್ಚಿದ್ದು, ಭಾರತದೊಂದಿಗೆ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಸಿಂಧೂ ಜಲ ಒಪ್ಪಂದದಡಿಯಲ್ಲಿ ಅದಕ್ಕೆ ಉದ್ದೇಶಿಸಲಾದ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಕ್ರಮವನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಪಾಕ್ ಹೇಳಿದೆ.

ಪಹಲ್ಗಾಮ್​ ಭಯೋತ್ಪಾದಕರ ದಾಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಾಳಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು. ದಾಳಿಯಲ್ಲಿ ಭಾಗಿಯಾದ ಉಗ್ರರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಶಿಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ