image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಶ್ಮೀರದ ಪಹಲ್ಗಾಮ್​ ಉಗ್ರ ದಾಳಿಗೆ ಜಾಗತಿಕ ನಾಯಕರಿಂದ ಖಂಡನೆ

ಕಾಶ್ಮೀರದ ಪಹಲ್ಗಾಮ್​ ಉಗ್ರ ದಾಳಿಗೆ ಜಾಗತಿಕ ನಾಯಕರಿಂದ ಖಂಡನೆ

ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವು ವಿಶ್ವ ನಾಯಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ ನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಭಾರತಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಫೋನ್​ ಕರೆಯಲ್ಲಿ ಮಾತನಾಡಿರುವ ಟ್ರಂಪ್, ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಘೋರ ದಾಳಿಯಾಗಿದ್ದು, ಅಪರಾಧಿಗಳನ್ನು ಹೆಡೆಮುರಿ ಕಟ್ಟಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಟ್ರಂಪ್​, "ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಒಟ್ಟಾಗಿ ನಿಂತಿವೆ" ಎಂದಿದ್ದಾರೆ. ಟ್ರೂತ್ ಸೋಷಿಯಲ್‌ ಮೀಡಿಯಾದಲ್ಲಿ, "ಕಾಶ್ಮೀರದಿಂದ ತೀವ್ರ ಆತಂಕಕಾರಿ ಸುದ್ದಿ ಹೊರಬಂದಿದೆ. 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಲುದಾರ ಭಾರತದೊಂದಿಗೆ ರಷ್ಯಾ ನಿಲ್ಲಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಹೇಳಿದ್ದಾರೆ.

ಇನ್ನು ಭಾರತದ ಪ್ರವಾಸದಲ್ಲಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ದಾಳಿಯನ್ನು ಖಂಡಿಸಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯ ಬಲಿಯಾದವರಿಗೆ ಸಂತಾಪ ಸೂಚಿಸುತ್ತೇವೆ. ಕೆಲವು ದಿನಗಳಿಂದ ನಾನು ಭಾರತದಲ್ಲೇ ಇದ್ದೇನೆ. ಇಲ್ಲಿನ ಜನರು ಮತ್ತು ನಾಡಿನ ಸೌಂದರ್ಯವನ್ನು ಅನುಭವಿಸುತ್ತಿದ್ದೇನೆ. ಅದರ ನಡುವೆ ಈ ಭಯಾನಕ ದಾಳಿ ನಡೆದಿರುವುದು ಆಘಾತ ಉಂಟು ಮಾಡಿದೆ ಎಂದಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ತೀವ್ರ ದುಃಖಿತರಾಗಿದ್ದೇವೆ ಎಂದು ಇಟಲಿ ಪ್ರಧಾನಿ ಮೆಲೋನಿ ಹೇಳಿದ್ದಾರೆ. ಸಂತ್ರಸ್ತ ಕುಟುಂಬಗಳು, ಗಾಯಾಳುಗಳು, ಸರ್ಕಾರ ಮತ್ತು ಇಡೀ ಭಾರತೀಯ ಜನರ ಜೊತೆ ನಾವಿದ್ದೇವೆ ಎಂದಿದ್ದಾರೆ. ಯುಎಇ, ಜರ್ಮನಿ, ಶ್ರೀಲಂಕಾ, ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳುವ ಕಾಶ್ಮೀರ ಉಗ್ರ ದಾಳಿಯನ್ನು ಖಂಡಿಸಿ ಭಾರತದ ಪರ ನಿಲ್ಲುವುದಾಗಿ ಹೇಳಿವೆ.

ಸೌದಿ ಅರೇಬಿಯಾಕ್ಕೆ ಮಂಗಳವಾರವಷ್ಟೇ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರು, ದಾಳಿ ಹಿನ್ನೆಲೆ ಭೇಟಿ ಮೊಟಕುಗೊಳಿಸಿ ಅಲ್ಲಿಂದ ಇಂದು ಬೆಳಗ್ಗೆ ಭಾರತಕ್ಕೆ ವಾಪಸ್​ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.

Category
ಕರಾವಳಿ ತರಂಗಿಣಿ