image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಂದಿನ 10 ವರ್ಷಗಳಲ್ಲಿ ಎಲ್ಲ ರೋಗಗಳಿಗೆ ಎಐ ಔಷಧಿ ಅಭಿವೃದ್ಧಿಪಡಿಸಲಿದೆ -ಡೀಪ್​​ಮೈಂಡ್​ ಸಿಇಒ

ಮುಂದಿನ 10 ವರ್ಷಗಳಲ್ಲಿ ಎಲ್ಲ ರೋಗಗಳಿಗೆ ಎಐ ಔಷಧಿ ಅಭಿವೃದ್ಧಿಪಡಿಸಲಿದೆ -ಡೀಪ್​​ಮೈಂಡ್​ ಸಿಇಒ

ಹೈದರಾಬಾದ್: ಕೃತಕ ಬುದ್ಧಿಮತ್ತೆಯು (ಎಐ) ಹಲವು ಕ್ಷೇತ್ರಗಳಲ್ಲಿ 'ಕ್ರಾಂತಿ' ಮಾಡಿದೆ. ಇತ್ತೀಚಿಗೆ ರೂಪಿಸಲಾಗುತ್ತಿರುವ ಎಐ ಮಾದರಿಗಳು ಆರೋಗ್ಯ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಸಾಧ್ಯತೆ ಇದೆ. ಇದಕ್ಕೆ ಗೂಗಲ್​ ಡೀಪ್​ಮೈಂಡ್​ ಸಹ ಸಂಸ್ಥಾಪಕ ಮತ್ತು ಸಿಇಒ ಡೆಮಿಸ್​ ಹಸ್ಸಾಬಿಸ್​ ನೀಡಿರುವ ಹೇಳಿಕೆಯೂ ಇಂಬು ನೀಡುವಂತಿದೆ.

"ಮುಂದಿನ 10 ವರ್ಷಗಳಲ್ಲಿ ಎಐ ಎಲ್ಲ ರೋಗಗಳಿಗೆ 'ಮದ್ದು' ಅರೆಯಲಿದೆ. ಈ ಮೂಲಕ ರೋಗಗಳನ್ನು ಇನ್ನಿಲ್ಲದಂತೆ ಮಾಡಲಿದೆ" ಎಂದು ಗೂಗಲ್​ ಡೀಪ್​ ಮೈಂಡ್​ ಸಹ ಸಂಸ್ಥಾಪಕ ಮತ್ತು ವಿಜ್ಞಾನಿಯೂ ಆಗಿರುವ ಡೆಮಿಸ್​ ಹಸ್ಸಾಬಿಸ್ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ.

"ರೋಗವೊಂದಕ್ಕೆ ಔಷಧವನ್ನು ಅಭಿವೃದ್ಧಿಪಡಿಸಲು ವರ್ಷಗಳು ತೆಗೆದುಕೊಳ್ಳುತ್ತದೆ. ಇದೀಗ, ಕೊನೆಗೊಳ್ಳುವ ಕಾಲ ಬಂದಿದೆ. ಎಐ ಮಾದರಿಗಳು ಮಾರಕ ರೋಗಗಳಿಗೆ ಮದ್ದನ್ನು ತಿಂಗಳುಗಳು ಅಥವಾ ವಾರದಲ್ಲಿ ಕಂಡುಹಿಡಿಯಲಿವೆ. ಎಐ ಸಹಾಯದಿಂದ ಎಲ್ಲ ರೋಗಗಳನ್ನು ಗುಣಪಡಿಸಬಹುದು. ಇದು ಮಾನವ ಆರೋಗ್ಯದಲ್ಲಿ ಕ್ರಾಂತಿ ತರಲಿದೆ" ಎಂದು ಹಸ್ಸಾಬಿಸ್​ ಅಭಿಪ್ರಾಯಪಟ್ಟಿದ್ದಾರೆ.

"ಮುಂದಿನ ದಿನಗಳಲ್ಲಿ ಈ ಕ್ರಾಂತಿ ಸಂಭವಿಸಲಿದೆ. AI ಎಲ್ಲಾ ರೋಗಗಳಿಗೆ ಅಂತ್ಯ ಹಾಡಬಹುದು. ಈ ಕುರಿತು ಸಂಶೋಧನೆಗಳು ಸಾಗಿವೆ. ನೂತನ ಮಾದರಿಯ ಕೃತಕ ಬುದ್ಧಿಮತ್ತೆಗಳು ಈ ಬಗ್ಗೆ ಉತ್ತರ ಹುಡುಕಲಿವೆ" ಎಂದಿದ್ದಾರೆ.

"ಒಬ್ಬ ಪಿಎಚ್​​ಡಿ ವಿದ್ಯಾರ್ಥಿ ಒಂದು ಪ್ರೋಟೀನ್​ ರಚನೆಯನ್ನು ಕಂಡುಹಿಡಿಯಲು 4 ರಿಂದ 5 ವರ್ಷ ತೆಗೆದುಕೊಳ್ಳುತ್ತಾನೆ. ವಿಜ್ಞಾನದಲ್ಲಿ 200 ಮಿಲಿಯನ್​ ಪ್ರೋಟೀನ್​ ರಚನೆಗಳಿವೆ. ಅದನ್ನು ನಮ್ಮ ಎಐ ಒಂದೇ ವರ್ಷದಲ್ಲಿ ರಚಿಸಿದೆ. ಅಂದರೆ, ಒಂದು ಬಿಲಿಯನ್​ ವರ್ಷಗಳ ಕಾಲ ಮಾಡುವ ಸಂಶೋಧನೆಯನ್ನು ಒಂದೇ ವರ್ಷದಲ್ಲಿ ಮಾಡಿ ಮುಗಿಸಿದ್ದೇವೆ" ಎಂದು ಹೇಳಿದ್ದಾರೆ.

"ಈ ಮಾದರಿಯ ಎಐ ಬಳಕೆಯನ್ನು ಮುಕ್ತವಾಗಿ ನೀಡಿದ್ದೇವೆ. ಅದನ್ನು ವಿಶ್ವದ ಎರಡು ಮಿಲಿಯನ್ ಸಂಶೋಧಕರು ಬಳಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಾಗಿ ಔಷಧಗಳನ್ನು ಅಭಿವೃದ್ಧಿಪಡಿಸಲು ಮತ್ತು ಅದಕ್ಕಾಗಿ ವಿನಿಯೋಗವಾಗುವ ಸಮಯವನ್ನು ಕಡಿಮೆ ಮಾಡಲು 'ಐಸೊಮಾರ್ಫಿಕ್' ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿದ್ದೇವೆ" ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಗೂಗಲ್​ ಡೀಪ್​ ಮೈಂಡ್​ ಸಿಇಒ ಡೆಮಿಸ್​ ಹಸ್ಸಾಬಿಸ್ ಅವರ ಸಂದರ್ಶನದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಪರ್ಪ್ಲೆಕ್ಸಿಟಿಯ ಸಿಇಒ ಅರವಿಂದ್ ಶ್ರೀನಿವಾಸ್ ಅವರು ಜೀನಿಯಸ್​​ (ಬುದ್ಧಿವಂತಿಕೆ) ಎಂದು ಬರೆದುಕೊಂಡಿದ್ದಾರೆ. "ಇಂತಹ ಸಂಶೋಧನೆಗಳು ನಡೆಯಲಿ. ಅದಕ್ಕೆ ಅಗತ್ಯ ನೆರವು ಸಿಗಲಿ" ಎಂದಿದ್ದಾರೆ.

Category
ಕರಾವಳಿ ತರಂಗಿಣಿ