ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಕನಿಷ್ಠ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಗೋಚರಿಸಿದೆ.
ಶಿವಮೊಗ್ಗದ ಮಂಜುನಾಥ್ ರಾವ್ ಅವರು ಉಗ್ರರ ದಾಳಿಯಲ್ಲಿ ಮೃತಪಟ್ಟಿರುವುದನ್ನು ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ. ಮೃತರ ಪತ್ನಿ ಪಲ್ಲವಿ ಮತ್ತು ಪುತ್ರನಿಗೆ ಯಾವುದೇ ಅಪಾಯವಾಗಿಲ್ಲ. ಮಂಜುನಾಥ್ ರಾವ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದ ವಿಜಯ ನಗರದ ನಿವಾಸಿಯಾಗಿರುವ ಮಂಜುನಾಥ್ ರಾವ್ ಅವರು ತಮ್ಮ ಪತ್ನಿ ಮತ್ತು ಪುತ್ರನ ಜೊತೆಗೆ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಇಂದು ಪ್ರವಾಸಿಗರ ಗುಂಪು ಕಾಲ್ನಡಿಗೆ ಮತ್ತು ಕುದುರೆಗಳ ಮೂಲಕ ಪಹಲ್ಗಾಮ್‌ನ ಬೈಸರನ್‌ನ ಹುಲ್ಲುಗಾವಲಿನಲ್ಲಿ ಹೋಗುತ್ತಿದ್ದಾಗ ದಾಳಿ ನಡೆದಿದ್ದು, ಅಪರಿಚಿತ ಬಂದೂಕುಧಾರಿಗಳು ಪ್ರವಾಸಿಗರ ಮೇಲೆ ಹತ್ತಿರದಿಂದಲೇ ಮನಬಂದಂತೆ ಗುಂಡು ಹಾರಿಸಿದ್ದು, ಹಲವರು ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.