ಪಶ್ಚಿಮ ಬಂಗಾಳ: ಇಲ್ಲಿನ ಮೇದಿನಿಪುರ ಜಿಲ್ಲೆಯ ಸಲ್ಬೊನಿಯಲ್ಲಿ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸ್ಥಾವರ ತಲಾ 800 ಮೆಗಾವ್ಯಾಟ್ನ ಎರಡು ಘಟಕಗಳನ್ನು ಹೊಂದಿದ್ದು, ಜೆಎಸ್ಡಬ್ಲ್ಯೂ ಎನರ್ಜಿ ನಿರ್ಮಾಣ ಮಾಡಿದೆ. ಕಂಪನಿಯು ಇದಕ್ಕಾಗಿ 1,600 ಕೋಟಿ ರೂ ಹೂಡಿಕೆ ಮಾಡಿದೆ. ಗ್ರೀನ್ಫೀಲ್ಡ್ ಸ್ಥಾವರ ಸ್ಥಾಪಿಸುವ ಮೂಲಕ ದೇಶದ ಪೂರ್ವ ಭಾಗದ ಇಂಧನ ವಲಯಕ್ಕೆ ಕಂಪನಿ ಇದೇ ಮೊದಲ ಬಾರಿ ಈ ಯೋಜನೆಯ ಮೂಲಕ ಪ್ರವೇಶಿಸಿದೆ.
ಮೊದಲ 800 ಮೆಗಾವ್ಯಾಟ್ ಘಟಕ 42 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದ್ದು, ಎರಡನೇ ಘಟಕ 48 ತಿಂಗಳಲ್ಲಿ ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಇದೇ ಸಲ್ಬೊನಿಯಲ್ಲಿ ಜೆಎಸ್ಡಬ್ಲ್ಯೂ ಸಿಮೆಂಟ್ ಗ್ರೈಡಿಂಗ್ ಘಟಕವನ್ನೂ ಕೂಡ ಹೊಂದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆಎಸ್ಡಬ್ಲ್ಯೂ ಗ್ರೂಪ್ ಮತ್ತು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್, "ಸಲ್ಬೊನಿಯಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವವರ ಇಂಥ ಬೆಳವಣಿಗೆಳ ಕುರಿತು ಖುಷಿ ಇದೆ. ಈ ಭೂಮಿ ರೈತರಿಗೆ ಸೇರಿದ್ದು, ಅವರು ಈ ಕೈಗಾರಿಕೆಗಳಿಂದ ಉತ್ತಮ ಪ್ರಯೋಜನ ಪಡೆಯಲಿದ್ದಾರೆ. ಸಲ್ಬೊನಿ ಪವರ್ ಸ್ಥಾವರದಲ್ಲಿ ಉನ್ನತ ಮಟ್ಟದ ತಂತ್ರಜ್ಞಾನ ಹೊಂದಿದ್ದು, ಮಾಲಿನ್ಯರಹಿತವಾಗಿದೆ. ಈ ಸ್ಥಾವರ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲಿದ್ದು, ವೇಗದ ಬೆಳವಣಿಗೆಗೆ ಕೊಡುಗೆ ನೀಡಲಿದೆ" ಎಂದರು.