ವ್ಯಾಟಿಕನ್ ಸಿಟಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ (88) ಅವರು ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಘೋಷಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಕಾರ್ಡಿನಲ್ ಕೆವಿನ್ ಫಾರೆಲ್ ಅವರು, "ಆತ್ಮೀಯ ಸಹೋದರ, ಸಹೋದರಿಯರೇ, ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ ಎಂಬುದನ್ನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ. (ಸೋಮವಾರ) ಬೆಳಿಗ್ಗೆ 7.35 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ.
"ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದ ಪೋಪ್ ಅವರು ಬಡವರು, ದೀನದಲಿತರಿಗಾಗಿ ಶ್ರಮಿಸಿದವರು. ತಮ್ಮ ಇಡೀ ಜೀವನವನ್ನು ಯೇಸು ಮತ್ತು ಚರ್ಚ್‌ನ ಸೇವೆಗೆ ಸಮರ್ಪಿಸಿಕೊಂಡಿದ್ದರು. ಅವರ ನಿಷ್ಠೆ, ಧೈರ್ಯ ಮತ್ತು ಪ್ರೀತಿಯು ನಮ್ಮ ಬದುಕಿಗೆ ಪಾಠ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಪೋಪ್ ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ತೀವ್ರ ಕಳವಳ ಮೂಡಿಸಿತ್ತು.
ಫೆಬ್ರವರಿ 14ರಂದು, ಪೋಪ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರದ ದಿನಗಳಲ್ಲಿ ಅವರಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ರಕ್ತಹೀನತೆಯಿಂದಲೂ ಬಳಲುತ್ತಿದ್ದ ಅವರಿಗೆ ರಕ್ತ ವರ್ಗಾವಣೆ ಮಾಡಲಾಗಿತ್ತು ಎಂದು ವ್ಯಾಟಿಕನ್ ತಿಳಿಸಿತ್ತು.
ಫೆಬ್ರವರಿ 22ರಂದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರಿಗೆ ಕೃತಕ ಆಕ್ಸಿಜನ್ ಅಳವಡಿಸಲಾಗಿತ್ತು. ಶ್ವಾಸಕೋಶ ಸಮಸ್ಯೆ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಗುರಿಯಾಗಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ತಿಂಗಳುಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಾರ್ಚ್ 6ರಂದು, ಅವರ ಧ್ವನಿಯ ಮೊದಲ ಬಾರಿಗೆ ಆಡಿಯೋ ಸಂದೇಶವನ್ನು ಹರಿಬಿಡಲಾಗಿತ್ತು. ಅದರಲ್ಲಿ ಅವರು "ನಾನು ನಿಮ್ಮೊಂದಿಗಿದ್ದೇನೆ" ಎಂದು ಧ್ವನಿಸಿತ್ತು. ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದವರಿಗಾಗಿ ಧನ್ಯವಾದ ಅರ್ಪಿಸಿದ್ದರು.
16ನೇ ಬೆನೆಡಿಕ್ಟ್ ಅವರ ರಾಜೀನಾಮೆ ಬಳಿಕ ಪೋಪ್ ಫ್ರಾನ್ಸಿಸ್ ಅವರು 2013ರಲ್ಲಿ ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದರು. ಇದೀಗ, ಅವರ ಅಗಲಿಕೆಯಿಂದ ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯವಾಗಿ ಮರಣದ 15ರಿಂದ 20 ದಿನಗಳ ನಡುವೆ ಹೊಸ ಪೋಪ್ ಆಯ್ಕೆ ನಡೆಯುತ್ತದೆ.