image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಮ್ಮುವಿನ ರಾಂಬನ್​​ನಲ್ಲಿ ಮೇಘಸ್ಫೋಟ

ಜಮ್ಮುವಿನ ರಾಂಬನ್​​ನಲ್ಲಿ ಮೇಘಸ್ಫೋಟ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೇಘಸ್ಫೋಟಕ್ಕೆ ಭೂಕುಸಿತ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ನಿರಂತರ ಮಳೆಯಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಹಲವು ಸ್ಥಳಗಳಲ್ಲಿ ಭೂಕುಸಿತ ಮತ್ತು ಮಣ್ಣು ಕುಸಿತ ಸಂಭವಿಸಿದೆ. ರಾಂಬನ್‌ನ ಸೆರಿ ಬಾಗ್ನಾ ಗ್ರಾಮದಲ್ಲಿ ಮೇಘಸ್ಫೋಟಕ್ಕೆ ಸಹೋದರರಾದ ಅಕಿಬ್ ಅಹ್ಮದ್, ಮೊಹಮ್ಮದ್ ಸಾಕಿಬ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ, ಮಳೆಬಾಧಿತ ಘಟನೆಗಳಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಿಯಾಸಿ ಜಿಲ್ಲೆಯ ಅರ್ನಾಸ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಸಿಡಿಲು ಬಡಿದು ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ.

ಧರಮ್ ಕುಂಡ್ ಗ್ರಾಮದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಸುಮಾರು 40 ಮನೆಗಳು ಹಾನಿಗೊಳಗಾಗಿವೆ. 10 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಉಳಿದವು ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿರಂತರ ಮಳೆ ಮತ್ತು ಭೂಕುಸಿತದ ನಡುವೆಯೂ ಬಾಧಿತ ಸ್ಥಳಗಳಿಗೆ ರಕ್ಷಣಾ ಸಿಬ್ಬಂದಿ ಆಗಮಿಸಿ, 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸ್ಥಳಾಂತರ ಮಾಡಿದ್ದಾರೆ. ಮಳೆ ನೀರಿನ ರಭಸಕ್ಕೆ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ವೇಗದ ಗಾಳಿ, ಭೂಕುಸಿತ ಮತ್ತು ಆಲಿಕಲ್ಲು ಮಳೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಭಾರಿ ಹಾನಿ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಶ್ರಿ ಮತ್ತು ಬನಿಹಾಲ್ ನಡುವಿನ ಹಲವು ಸ್ಥಳಗಳಲ್ಲಿ ಭೂಕುಸಿತ, ಮಣ್ಣು ಕುಸಿತ ಉಂಟಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್​ ಆಗಿದೆ. ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಸಂಚಾರ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ