ಪಾಕಿಸ್ತಾನ : ಪಾಕಿಸ್ತಾನದಲ್ಲಿ ಒಂದೇ ವಾರದ ಅಂತರದಲ್ಲಿ ಎರಡನೇ ಬಾರಿಗೆ ಭೂಮಿ ಕಂಪಸಿದೆ. ಇಂದು (ಶನಿವಾರ) 5.9 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಆದರೆ, ಇದುವರೆಗೆ ಯಾವುದೇ ಜೀವ ಮತ್ತು ಆಸ್ತಿಪಾಸ್ತಿ ನಷ್ಟ ವರದಿಯಾಗಿಲ್ಲ.
ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಕೇಂದ್ರದ ಪ್ರಕಾರ, ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿ ಪ್ರದೇಶದ ಬಳಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. 94 ಕಿಲೋಮೀಟರ್ ಆಳದಲ್ಲಿ ಅಲೆಗಳು ಎದ್ದಿವೆ. ಬೆಳಗ್ಗೆ 11:47 ಕ್ಕೆ ಭೂಮಿ ಅಲುಗಾಡಿದೆ ಎಂದು ತಿಳಿಸಿದೆ.
ಇಸ್ಲಾಮಾಬಾದ್, ಲಾಹೋರ್, ಪೇಶಾವರ್, ರಾವಲ್ಪಿಂಡಿ ಮತ್ತು ಖೈಬರ್ ಪಖ್ತುಂಖ್ವಾದ ವಿವಿಧ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಅದರಲ್ಲೂ ಖೈಬರ್ ಪಖ್ತುಂಖ್ವಾದ ಲೋವರ್ ದಿರ್, ಬಜೌರ್, ಮಲಕಂಡ್, ನೌಶೇರಾ, ದಿರ್ ಬಾಲಾ, ಶಬ್ಖಾದರ್ ಮತ್ತು ಮೊಹಮ್ಮದ್ ಪ್ರದೇಶಗಳಿಂದ ಭೂಮಿ ಬಲವಾಗಿ ಅಲುಗಾಡಿದ್ದು, ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ.
ಕಳೆದ ಶನಿವಾರವಷ್ಟೇ ರಾಜಧಾನಿ ಇಸ್ಲಾಮಾಬಾದ್, ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ 5.5 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಅದಾಗಿ 8 ದಿನಗಳಲ್ಲಿ ಇದು ಎರಡನೇ ಭೂಕಂಪವಾಗಿದೆ. 2005 ರಲ್ಲಿ ದೇಶದಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿತ್ತು. ಪ್ರಕೃತಿಯ ಮುನಿಸಿಗೆ 74 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪ ಸಂಭವಿಸಿ, 1600 ಜನರನ್ನ ಬಲಿ ಪಡೆದಿದೆ. 3400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 7.7 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದರಿಂದ ಹಲವಾರು ಕಟ್ಟಡಗಳು, ಸೇತುವೆಗಳು ನೆಲಸಮವಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಿಂದ ಈಗಾಗಲೇ ಹಲವು ಮೃತದೇಹಗಳನ್ನು ಹೊರೆತೆಗೆಯಲಾಗಿದೆ.
ಮ್ಯಾನ್ಮಾರ್‌ನಲ್ಲಿ ಕನಿಷ್ಠ 1,644 ಜನರು ಸಾವನ್ನಪ್ಪಿದ್ದು, 3,400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕನಿಷ್ಠ 139 ಜನರು ಕಾಣೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಬ್ಯಾಂಕಾಕ್‌ನಲ್ಲಿ ಸುಮಾರು 10 ಸಾವುಗಳು ದೃಢಪಟ್ಟಿವೆ.