ಮಧ್ಯಪ್ರದೇಶ: ದಕ್ಷಿಣ ಆಫ್ರಿಕಾದ ಬೊಟ್ಸ್ವಾನದಿಂದ ಮತ್ತೆ 8 ಚೀತಾಗಳನ್ನು ಭಾರತಕ್ಕೆ ತರಲು ನಿರ್ಧರಿಸಲಾಗಿದ್ದು, ಎರಡು ಹಂತಗಳಲ್ಲಿ ಈ ಚೀತಾಗಳು ಈ ಬರಲಿದ್ದು, ಮೇಯಲ್ಲಿ ನಾಲ್ಕು ಚಿರತೆ ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ಚೀತಾ ಯೋಜನೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.
ಕೀನ್ಯಾ ಮತ್ತು ಬೊಟ್ಸ್ವಾನದಿಂದ ಹೆಚ್ಚಿನ ಚಿರತೆಗಳನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ಸಾಗಿದೆ. ಎರಡು ಹಂತದಲ್ಲಿ ಎಂಟು ಚೀತಾಗಳನ್ನು ತರಲಾಗುವುದು. ಮೇಯಲ್ಲಿ ನಾಲ್ಕು ಚೀತಾಗಳು ಬೊಟ್ಸ್ವಾನದಿಂದ ಬರಲಿದ್ದು, ಇದಾದ ಬಳಿಕ ಮತ್ತೆ ನಾಲ್ಕು ಚೀತಾಗಳು ಆಗಮಿಸಲಿವೆ. ಸದ್ಯ ಈ ಸಂಬಂಧ ಭಾರತ ಮತ್ತು ಕೀನ್ಯಾ ನಡುವೆ ಒಪ್ಪಂದಕ್ಕೆ ಮುಂದಾಗಲಾಗುತ್ತಿದೆ.ದೇಶದಲ್ಲಿ ಇದುವರೆಗೆ ಚೀತಾ ಯೋಜನೆಗೆ 112 ಕೋಟಿ ರೂ. ವ್ಯಯ ಮಾಡಲಾಗಿದೆ. ಅದರಲ್ಲಿ ಶೇ 67ರಷ್ಟು ಮಧ್ಯಪ್ರದೇಶದಲ್ಲಿ ಚೀತಾಗಳ ಪುನರ್ವಸತಿಗೆ ಹೋಗಿದೆ ಎಂದು ಎನ್‌ಟಿಸಿಎ ಅಧಿಕಾರಿಗಳು ಹೇಳಿದರು.
ಚೀತಾ ಯೋಜನೆ ಅಡಿಯಲ್ಲಿ ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಚೀತಾಗಳನ್ನು ಈಗ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಈ ಅಭಯಾರಣ್ಯವೂ ರಾಜಸ್ಥಾನದ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವೆ ಅಂತಾರಾಜ್ಯ ಚಿರತೆ ಸಂರಕ್ಷಣೆ ಪ್ರದೇಶ ಒಪ್ಪಂದಕ್ಕೆ ಮುಂದಾಗಲಾಗುವುದು. ಎಂದು ಮಾಹಿತಿ ನೀಡಿದರು.
ಕುನೋ ರಾಷ್ಟ್ರೀಯ ಪಾರ್ಕ್ನಲ್ಲಿ 26 ಚಿರತೆಗಳಿದ್ದು, ಇದರಲ್ಲಿ 16 ಮುಕ್ತ ಅರಣ್ಯದಲ್ಲಿದ್ದರೆ, 10 ಪುನರ್ವಸತಿ ಕೇಂದ್ರದಲ್ಲಿದೆ. ಚಿರತೆಗಳನ್ನು ಸಾಟಲೈಟ್ ಕಾಲರ್ ಐಡಿ ಬಳಸಿ 24 ಗಂಟೆ ಟ್ರ್ಯಾಕ್ ಮಾಡಲಾಗುತ್ತಿದೆ. ಜ್ವಾಲ, ಆಶಾ, ಗಮಿನಿ ಮತ್ತು ವೀರಾ ಮಹಿಳಾ ಚಿರತೆಗಳು ಮರಿಗಳಿಗೆ ಜನ್ಮ ನೀಡಿದ್ದು, ಕಳೆದೆರಡು ವರ್ಷಗಳಲ್ಲಿ ಕುನೋ ರಾಷ್ಟ್ರೀಯ ಪಾರ್ಕ್ನಲ್ಲಿ ಚೀತಾ ಸಂಖ್ಯೆ ದುಪ್ಪಟ್ಟಾಗಿದೆ.
ಕುನೋದಲ್ಲಿ ಚೀತಾ ಸಫಾರಿಗೆ ಅನುಮತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ. ಅರಣ್ಯದಲ್ಲಿ ಅಥವಾ ಪರಿಸರ ಸೂಕ್ಷ್ಮ ವಲಯದಲ್ಲಿ ಚೀತಾ ಸಫಾರಿಗೆ ಈ ಅನುಮತಿ ಅಗತ್ಯವಾಗಿದೆ. ಈ ಅರ್ಜಿ ಇನ್ನೂ ಬಾಕಿ ಉಳಿದಿದೆ ಎಂದರು.
ನಮಿಬಿಯಾದಿಂದ 2022ರ ಸೆಪ್ಟೆಂಬರ್ 17ರಂದು ಏಂಟು ಚೀತಾಗಳನ್ನು ಮೊದಲ ಬಾರಿಗೆ ಕುನೋ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವ ಮೂಲಕ ಕರೆತರಲಾಗಿತ್ತು. 2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಯನ್ನು ತರಲಾಗಿತ್ತು.