ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಫ್ರೀ ಸ್ಟೇಟ್ ಪ್ರಾಂತ್ಯದಲ್ಲಿ, ವರ್ಣಭೇದ ನೀತಿಯ ಕಾನೂನಿನಿಂದಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಭಾರತೀಯರನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ಅದೇ ಪ್ರಾಂತ್ಯದ ಬ್ಲೋಮ್ಫಾಂಟೈನ್ ಪ್ರಾಂತೀಯ ರಾಜಧಾನಿಯಲ್ಲಿರುವ ಆಂಗ್ಲೋ-ಬೋಯರ್ ಯುದ್ಧ ವಸ್ತುಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧೀಜಿ ಅವರ ಜೀವಿತಾವಧಿಗಿಂತಲೂ ದೊಡ್ಡದಾದ ಪ್ರತಿಮೆಯೊಂದು ತಲೆ ಎತ್ತಿ ನಿಂತಿದೆ.
ಈ ಪ್ರತಿಮೆಯನ್ನು ಏಪ್ರಿಲ್ 11 ರಂದು ಭಾರತೀಯ ಹೈಕಮಿಷನರ್ ಪ್ರಭಾತ್ ಕುಮಾರ್ ಅವರು ಅನಾವರಣಗೊಳಿಸಿದರು. ಇದೇ ವೇಳೆ 1899 - 1902ರ ಆಂಗ್ಲೋ- ಬೋಯರ್ ಯುದ್ಧದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯ ಕುರಿತು ಇಲ್ಲಿವರೆಗೆ ತಿಳಿಯದ ಕಥೆಗಳ ಕುರಿತ ಸಾಕ್ಷ್ಯಚಿತ್ರ ಜೊತೆಗೆ ಪುಸ್ತಕವನ್ನು ಕೂಡ ಬಿಡುಗಡೆಗೊಳಿಸಿದರು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಾಂಗಿ ಸುತಾರ್ ಅವರು, ಗಾಂಧೀಜಿಯ ಕಂಚಿನ ಪ್ರತಿಮೆಯನ್ನು ಭಾರತೀಯು ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ವಸ್ತುಸಂಗ್ರಹಾಲಯದ ಮೂಲಕ ಅಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ದಾನ ನೀಡಿದ್ದಾರೆ.
1994ರಲ್ಲಿ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಮೊದಲ ಪ್ರಜಾಪ್ರಭುತ್ವ ಅಧ್ಯಕ್ಷರಾಗಿ ಆಯ್ಕೆಯಾಗುವವರೆಗೂ, ಈ ಹಿಂದೆ ಆರೆಂಜ್ ಫ್ರೀ ಸ್ಟೇಟ್ ಎಂದು ಕರೆಯಲ್ಪಡುತ್ತಿದ್ದ ಪ್ರಾಂತ್ಯಕ್ಕೆ ಭಾರತೀಯರನ್ನು ಕಾನೂನಿನ ಮೂಲಕ ನಿಷೇಧಿಸಲಾಗಿತ್ತು. ಕಬ್ಬಿನ ಕೃಷಿ ಒಪ್ಪಂದದ ಕಾರ್ಮಿಕರಾಗಿ ತಮ್ಮ ಪೂರ್ವಜರು ಮೊದಲು ಬಂದಿಳಿದ ಕರಾವಳಿ ನಗರವಾದ ಡರ್ಬನ್ಗೆ ಹೋಗಲು ಈ ಪ್ರಾಂತ್ಯದ ಮೂಲಕ ಪ್ರಯಾಣಿಸುವವರು ಸಹ ಮುಂಗಡವಾಗಿ ಪರವಾನಗಿ ಪಡೆಯಬೇಕಾಗಿತ್ತು.
"ಬ್ಲೋಮ್ಫಾಂಟೈನ್ನಲ್ಲಿರುವ ಯುದ್ಧ ವಸ್ತುಸಂಗ್ರಹಾಲಯದಲ್ಲಿ ದಕ್ಷಿಣ ಆಫ್ರಿಕಾದ ಆಂಗ್ಲೋ-ಬೋಯರ್ ಯುದ್ಧವನ್ನು ಕೇಂದ್ರ ವಿಷಯವನ್ನಾಗಿ ಪ್ರಸ್ತುತಪಡಿಸಲಾಗಿದೆ. ಈ ಯುದ್ಧದಲ್ಲಿ ಬಿಳಿಯರು, ಆಫ್ರಿಕನ್ಗಳು, ವರ್ಣೀಯರು ಮತ್ತು ಭಾರತೀಯರು ಸೇರಿದಂತೆ ಎಲ್ಲಾ ಜನಾಂಗದ ದಕ್ಷಿಣ ಆಫ್ರಿಕನ್ನರು ಭಾಗವಹಿಸಿದ್ದರು. ಈ ಪಬ್ಲಿಕೇಶನ್ ಮೂಲಕ ದಕ್ಷಿಣ ಆಫ್ರಿಕಾದ ಭಾರತೀಯರು ಮತ್ತು ಭಾರತದಿಂದ ಬಂದವರು ಸೇರಿ, ಯುದ್ಧದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಬಗ್ಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಸ್ತುತಿ ನೀಡುವ ಯೋಜನೆಯನ್ನು ವಸ್ತುಸಂಗ್ರಹಾಲಯ ಪ್ರಾರಂಭಿಸಿದೆ" ಎಂದು ಬ್ಲೋಮ್ಫಾಂಟೈನ್ನಲ್ಲಿರುವ ಯುದ್ಧ ವಸ್ತುಸಂಗ್ರಹಾಲಯದ ನಿರ್ದೇಶಕಿ ಟೋಕಿ ಪ್ರಿಟೋರಿಯಸ್ ತಿಳಿಸಿದರು.