image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಲೆಕ್ಟ್ರಾನಿಕ್​ ವಸ್ತುಗಳಿಗೆ ಪ್ರತಿ ಸುಂಕ ವಿನಾಯಿತಿ ಘೋಷಿಸಿದ ಅಮೆರಿಕ

ಎಲೆಕ್ಟ್ರಾನಿಕ್​ ವಸ್ತುಗಳಿಗೆ ಪ್ರತಿ ಸುಂಕ ವಿನಾಯಿತಿ ಘೋಷಿಸಿದ ಅಮೆರಿಕ

ಅಮೆರಿಕ: ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಸುಂಕ ಯುದ್ಧ ಸಾರಿರುವ ಅಮೆರಿಕವು ಅಲ್ಪ ವಿನಾಯಿತಿಯನ್ನೂ ಘೋಷಿಸಿದೆ. ಸ್ಮಾರ್ಟ್​ಫೋನ್​, ಲ್ಯಾಪ್​​ಟಾಪ್​​ ಸೇರಿದಂತೆ ಕೆಲ ಎಲೆಕ್ಟ್ರಾನಿಕ್​ ವಸ್ತುಗಳನ್ನು ಪ್ರತಿ ಸುಂಕದಿಂದ ಹೊರಗಿಡುವುದಾಗಿ ತಿಳಿಸಿದೆ.

ಅಮೆರಿಕದಲ್ಲಿ ತಯಾರಾಗದ ಎಲೆಕ್ಟ್ರಾನಿಕ್​ ವಸ್ತುಗಳ ಮೇಲೆ ಈ ಸುಂಕ ನಿಯಮ ಅನ್ವಯಿಸುವುದಿಲ್ಲ. ಇದು ಗ್ರಾಹಕರ ಮೇಲೆ ಬೀಳುವ ಹೆಚ್ಚಿನ ಹೊರೆ ತಗ್ಗಿಸಲು ಡೊನಾಲ್ಡ್​ ಟ್ರಂಪ್​ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ವಿನಾಯಿತಿಯಿಂದ ಎಲೆಕ್ಟ್ರಾನಿಕ್​ ಕಂಪನಿಗಳಾದ ಆ್ಯಪಲ್, ಸ್ಯಾಮ್‌ಸಂಗ್‌, ಎನ್‌ವಿಡಿಯಾದಂತಹ (Nvidia) ಚಿಪ್ ತಯಾರಿಕಾ ಕಂಪನಿಗಳು ತೆರಿಗೆ ಹೊಡೆತದಿಂದ ತಪ್ಪಿಸಿಕೊಳ್ಳಲಿವೆ.

ಪ್ರತಿ ಸುಂಕದಿಂದ ಹೊರಗಿಡಲಾದ ಉತ್ಪನ್ನಗಳ ಪಟ್ಟಿಯನ್ನು ಅಮೆರಿಕದ ಸುಂಕ ಹಾಗೂ ಗಡಿ ಭದ್ರತಾ ಇಲಾಖೆ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಮೊಡೆಮ್​ ರೂಟರ್​, ಫ್ಲ್ಯಾಶ್​ಡ್ರೈವ್​ ಹಾಗೂ ತಂತ್ರಜ್ಞಾನ ಉತ್ಪನ್ನಗಳು ಇದರಲ್ಲಿ ಸೇರಿವೆ. ಇವುಗಳಲ್ಲಿ ಹೆಚ್ಚಿನವನ್ನು ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವುದಿಲ್ಲ.

ಚೀನಾದ ಮೇಲೆ ಪ್ರತಿ ಸುಂಕ ಮುಂದುವರಿಕೆ: ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ ಶೇಕಡಾ 145ರಷ್ಟು ಪ್ರತಿ ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಸೂಚಿತ ಮೊಬೈಲ್​, ಎಲೆಕ್ಟ್ರಾನಿಕ್​ ವಸ್ತುಗಳಿಗೆ ಅನ್ವಯಿಸುವುದಿಲ್ಲ. ತೆರಿಗೆ ಏರಿಕೆಗಿಂತ ಮೊದಲಿದ್ದ ಆಮದು ನಿಯಮಗಳು ಆ ವಸ್ತುಗಳ ಮೇಲೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್​ ಸರ್ಕಾರ ಚೀನಾದ ಮೇಲೆ ಅತ್ಯಧಿಕ ಸುಂಕ ಹೇರಿದ ಬೆನ್ನಲ್ಲೇ, ವಿಶ್ವದ ವಿವಿಧ ದೇಶಗಳಲ್ಲಿ ಮೊಬೈಲ್​ ಫೋನ್​​ಗಳನ್ನು ಉತ್ಪಾದಿಸುವ ಕಂಪನಿಗಳು ತೆರಿಗೆ ಹೊಡೆತದಿಂದ ನಷ್ಟಕ್ಕೀಡಾಗುವ ಭೀತಿ ಎದುರಿಸಿದ್ದವು. ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಿಸಿ ಅವುಗಳನ್ನು ಹೊಸ ಸುಂಕ ಜಾರಿಯಾಗುವ ಮೊದಲೇ ಅಮೆರಿಕಕ್ಕೆ ಕೊಂಡೊಯ್ದಿವೆ.

ಮಾಹಿತಿ ಪ್ರಕಾರ, ಅತಿಹೆಚ್ಚು ಬೇಡಿಕೆಯುಳ್ಳ ಆ್ಯಪಲ್​ ಕಂಪನಿಯ 15 ಲಕ್ಷ ಐಫೋನ್​ಗಳನ್ನು ಕಳೆದ ವಾರ ಭಾರತದಿಂದ ಅಮೆರಿಕಕ್ಕೆ ರವಾನಿಸಲಾಗಿದೆ. ಕಂಪನಿಯು ಹೆಚ್ಚಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು 6 ವಿಮಾನಗಳಲ್ಲಿ 600 ಟನ್​ ತೂಕದಷ್ಟು ಐಫೋನ್​ಗಳನ್ನು ಸಾಗಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

Category
ಕರಾವಳಿ ತರಂಗಿಣಿ