image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯಪಾಲರ ಅಂಕಿತ ಇಲ್ಲದೆಯೇ ತಮಿಳುನಾಡಿನಲ್ಲಿ 10 ಮಸೂದೆಗಳು ಕಾಯ್ದೆಯಾಗಿ ಜಾರಿ

ರಾಜ್ಯಪಾಲರ ಅಂಕಿತ ಇಲ್ಲದೆಯೇ ತಮಿಳುನಾಡಿನಲ್ಲಿ 10 ಮಸೂದೆಗಳು ಕಾಯ್ದೆಯಾಗಿ ಜಾರಿ

ತಮಿಳುನಾಡು : ತಮಿಳುನಾಡು ರಾಜ್ಯಪಾಲರು ತಡೆಹಿಡಿದಿದ್ದ 10 ಮಸೂದೆಗಳು ಅಂಕಿತ ಬೀಳದಿದ್ದರೂ, ಕಾಯ್ದೆಯಾಗಿ ಬಂದಿವೆ. ಇದಕ್ಕೆ ಕಾರಣ ಸುಪ್ರೀಂಕೋರ್ಟ್​ ನೀಡಿದ ಮಹತ್ವದ ತೀರ್ಪು. ಮೂರು ತಿಂಗಳಿಗೂ ಅಧಿಕ ಕಾಲ ಯಾವುದೇ ಮಸೂದೆಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ತಡೆಹಿಡಿಯುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ರಾಜ್ಯಪಾಲರಿಗೆ ಸಮಯದ ಗಡುವು ನೀಡಿದ ಕಾರಣ ಮತ್ತು ತೀರ್ಪಿನ ಮಾಹಿತಿ ಕೋರ್ಟ್​ನ ವೆಬ್​ಸೈಟ್​ನಲ್ಲಿ ಪ್ರಕಟವಾದ ಬೆನ್ನಲ್ಲೇ, ತಡೆದಿದ್ದ ಎಲ್ಲ ಮಸೂದೆಗಳು ಕಾಯ್ದೆಯಾಗಿ ಜಾರಿಗೆ ಬಂದಿವೆ ಎಂದು ತಮಿಳುನಾಡು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದಕ್ಕೆ ಸಹಜವಾಗಿಯೇ ಸಂಭ್ರಮಿಸಿರುವ ಡಿಎಂಕೆ ನಾಯಕರು, ರಾಜ್ಯಪಾಲರು ಕಾನೂನಿಗೆ ಅತೀತರಲ್ಲ ಎಂಬುದು ಸುಪ್ರೀಂಕೋರ್ಟ್​ ತೀರ್ಪು ಸ್ಪಷ್ಟಪಡಿಸಿದೆ. ಜನಪರ ಮತ್ತು ಆಡಳಿತಾತ್ಮಕ ಮಸೂದೆಗಳನ್ನು ರಾಜಕೀಯ ಕಾರಣಗಳಿಂದ ವಿಳಂಬವಾಗುವುದು ತಪ್ಪಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್​, ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಪ್ರಮುಖ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದೆ ಕಾಲಮಿತಿಯಿಲ್ಲದೇ ತಮ್ಮಲ್ಲೇ ಉಳಿಸಿಕೊಳ್ಳುವುದು 'ಕಾನೂನುಬಾಹಿರ' ಮತ್ತು 'ಅನಿಯಂತ್ರಿತ ಅಧಿಕಾರ' ಎಂದು ಹೇಳಿತ್ತು.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ಈ ತೀರ್ಪು ನೀಡಿತ್ತು. ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟಾವಧಿವರೆಗೆ ತಡೆಹಿಡಿಯಲು ಸಾಧ್ಯವಿಲ್ಲ. ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ತರದೆ ಇರಲೂ ಬರುವುದಿಲ್ಲ ಎಂದಿದೆ.

ಸಂವಿಧಾನದ ವಿಧಿ 200ರ ಪ್ರಕಾರ, ರಾಜ್ಯಪಾಲರು ಮಸೂದೆಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಮತ್ತು ಅವುಗಳ ಮೇಲೆ ಪಾಕೆಟ್ ವಿಟೋ ಚಲಾಯಿಸಲು ಅವಕಾಶವಿಲ್ಲ. ಯಾವುದೇ ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿಯಲು ಬರುವುದಿಲ್ಲ. ಮೂರು ತಿಂಗಳ ಒಳಗೆ ಯಾವುದೇ ಮಸೂದೆಗಳನ್ನು ಅಂಗೀಕರಿಸಬೇಕು. ಇವನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಬಗ್ಗೆಯೂ ಆ ಅವಧಿಯೊಳಗೆ ನಿರ್ಧರಿಸಬೇಕು ಎಂದು ಆದೇಶಿಸಿದೆ. ಈ ನಿಯಮ ರಾಷ್ಟ್ರಪತಿಗಳಿಗೂ ಅನ್ವಯಿಸುತ್ತದೆ ಎಂದೂ ಹೇಳಿದೆ.

Category
ಕರಾವಳಿ ತರಂಗಿಣಿ