ಜಾರ್ಖಂಡ್ : ವಿದ್ಯುತ್ಚಾಲಿತ ಮತಯಂತ್ರಗಳನ್ನ (ಇವಿಎಂ) ಟ್ಯಾಂಪರಿಂಗ್ ಮಾಡುವ ಬಗ್ಗೆ ಇದ್ದ ಅನುಮಾನದ ಚುನಾವಣಾ ಆಯೋಗ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಇವಿಎಂಗಳನ್ನು ಹ್ಯಾಕ್ ಮತ್ತು ಟ್ಯಾಂಪರಿಂಗ್ ಮಾಡಲು ಬರುವುದಿಲ್ಲ. ಅವುಗಳು ಇಂಟರ್ನೆಟ್, ಬ್ಲೂಟೂತ್ ನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಇವಿಎಂಗಳು ಸಂಪೂರ್ಣ ಭದ್ರತೆಯಿಂದ ಕೂಡಿವೆ. ಅವುಗಳು ಇಂಟರ್ನೆಟ್, ಬ್ಲೂಟೂತ್ ಅಥವಾ ಇನ್ಫ್ರಾರೆಡ್‌ಗೆ ಸಂಪರ್ಕಗೊಂಡಿಲ್ಲ. ಆದ್ದರಿಂದ ಅವುಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದರು.
ಪಾರದರ್ಶಕ, ಸುರಕ್ಷಿತ: ಮತ ಚಲಾಯಿಸಿದ ನಂತರ, ಗುಂಡಿಯನ್ನು ಒತ್ತುವ ಅಭ್ಯರ್ಥಿಗೆ VVPAT ಸ್ಲಿಪ್ನಲ್ಲಿ ತಾನು ಸೂಚಿಸಿದ ಅಭ್ಯರ್ಥಿ ಅಥವಾ ಪಕ್ಷದ ಚಿಹ್ನೆ ಕಾಣಿಸುತ್ತದೆ. ಇಲ್ಲಿಯವರೆಗೆ, 5 ಕೋಟಿಗೂ ಹೆಚ್ಚು ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಸಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂಪೂರ್ಣವಾಗಿ ಪಾರದರ್ಶಕ ಮತ್ತು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿದರು.
ಅಮೆರಿಕದ ಗುಪ್ತಚರ ಇಲಾಖೆಗಳ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಮತ್ತು ಕಾಂಗ್ರೆಸ್ ಇವಿಎಂಗಳ ಬಗ್ಗೆ ಪ್ರಶ್ನೆ ಎತ್ತಿದ ಕುರಿತು ಪ್ರತಿಕ್ರಿಯಿಸಿದ ಜ್ಞಾನೇಶ್ಕುಮಾರ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಚುನಾವಣೆಯು ಕಲುಷಿತವಾಗಿಲ್ಲ. ನಾವು ಬಳಸುತ್ತಿರುವ ಮತಯಂತ್ರಗಳು ಸುಭದ್ರ ಮತ್ತ್ತು ಸುರಕ್ಷಿತವಾಗಿವೆ ಎಂದರು.
ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಾಗದು. ಅವುಗಳನ್ನು ತಿರುಚಲಾಗದು ಎಂದು ಈ ಹಿಂದೆಯೂ ಚುನಾವಣಾ ಆಯೋಗ ಹಲವು ಬಾರಿ ಸ್ಪಷ್ಟನೆ ನೀಡಿದೆ. ಆಯೋಗದ ಮಾಜಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು, ಇವಿಎಂಗಳನ್ನು ಹ್ಯಾಕ್ ಮಾಡುವ ಆರೋಪಗಳು ಆಧಾರರಹಿತ ಎಂದು ನ್ಯಾಯಾಲಯಗಳು 42 ಬಾರಿ ತೀರ್ಪು ನೀಡಿವೆ ಎಂದು ಹೇಳಿದ್ದರು.
ಸುಳ್ಳಿನ ಬಲೂನುಗಳನ್ನು ನಂಬದಿರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದ ಅವರು, ಮತದಾನದ ದಿನಕ್ಕಿಂತ ಏಳರಿಂದ ಎಂಟು ದಿನಗಳ ಮೊದಲು ಮಾತ್ರ ಇವಿಎಂಗಳನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಇವುಗಳ ಬಗ್ಗೆ ಪ್ರತಿ ಹಂತದಲ್ಲೂ ಅವರ ಏಜೆಂಟರ ಮೂಲಕ ಮಾಹಿತಿ ನೀಡಲಾಗುತ್ತದೆ. ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳೇ ಹೇಳಿವೆ. ಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.