image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದ ಕೇಂದ್ರ ಗೃಹ ಸಚಿವಾಲಯ.....

ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದ ಕೇಂದ್ರ ಗೃಹ ಸಚಿವಾಲಯ.....

ನವದೆಹಲಿ: ಮುಂದಿನ ವರ್ಷದ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುವ 2026ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮತ್ತು ಶಿಫಾರಸುಗಳ ಪ್ರಕ್ರಿಯೆಯನ್ನು ಗೃಹ ಸಚಿವಾಲಯ (ಎಂಎಚ್ಎ) ಪ್ರಾರಂಭಿಸಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮತ್ತು ಶಿಫಾರಸುಗಳಿಗೆ ಕೊನೆಯ ದಿನಾಂಕ ಜುಲೈ 31, 2025 ಆಗಿದ್ದು, ಇವುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (https://awards.gov.in) ಮೂಲಕ ಆನ್ ಲೈನ್​ನಲ್ಲಿ ಸ್ವೀಕರಿಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪದ್ಮ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಇವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿವೆ. 1954ರಲ್ಲಿ ಪ್ರಾರಂಭಿಸಲಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಮುಂತಾದ ಕ್ಷೇತ್ರಗಳು ಮತ್ತು ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆ ಮತ್ತು ಸೇವೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಪಿಎಸ್​ಯುಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.

ನಾಮನಿರ್ದೇಶನಗಳು ಮತ್ತು ಶಿಫಾರಸುಗಳು ಪೋರ್ಟಲ್​ನಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು. ಇದರಲ್ಲಿ ನಿರೂಪಣಾ ರೂಪದಲ್ಲಿ ಉಲ್ಲೇಖ (ಗರಿಷ್ಠ 800 ಪದಗಳು), ಅವರ ಸಂಬಂಧಿತ ಕ್ಷೇತ್ರ / ವಿಭಾಗದಲ್ಲಿ ಶಿಫಾರಸು ಮಾಡಲಾದ ವ್ಯಕ್ತಿಯ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು / ಸೇವೆಯನ್ನು ಸ್ಪಷ್ಟವಾಗಿ ವಿವರಿಸಬೇಕು. ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು https://padmaawards.gov.in/AboutAwards.aspx ವೆಬ್​ಸೈಟ್​ನಲ್ಲಿ ನೋಡಬಹುದಾಗಿದೆ.

ಪದ್ಮ ಪ್ರಶಸ್ತಿಗಳನ್ನು 'ಜನರ ಪದ್ಮ'ವನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ನಾಮನಿರ್ದೇಶನಗಳು ಮತ್ತು ಶಿಫಾರಸುಗಳನ್ನು ಮಾಡುವಂತೆ ವಿನಂತಿಸಲಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಹಿಳೆಯರು, ಸಮಾಜದ ದುರ್ಬಲ ವರ್ಗಗಳು, ಎಸ್ಸಿ ಮತ್ತು ಎಸ್ಟಿ ವರ್ಗದವರು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಅದು ಹೇಳಿದೆ.

Category
ಕರಾವಳಿ ತರಂಗಿಣಿ