ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು 2025 ರ ಏಪ್ರಿಲ್ 8 ರಿಂದ 9 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ದೇಶದ ಉಪ ಪ್ರಧಾನಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ರಕ್ಷಣಾ ಸಚಿವರೂ ಆಗಿದ್ದಾರೆ.
ದುಬೈನ ಯುವರಾಜನಾಗಿ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಅವರೊಂದಿಗೆ ಹಲವಾರು ಪ್ರಮುಖ ಸಚಿವರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ವ್ಯಾಪಾರ ನಾಯಕರ ಪ್ರಮುಖ ನಿಯೋಗ ಭಾರತಕ್ಕೆ ಆಗಮಿಸುತ್ತಿದೆ. ಇದು ಭಾರತ-ಯುಎಇಗಳ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲವಾಗುತ್ತಿರುವುದರ ಸೂಚನೆಯಾಗಿದೆ.
ಏಪ್ರಿಲ್ 8 ರಂದು ಪ್ರಧಾನಿ ಮೋದಿ ಅವರು ಯುವರಾಜರ ಆಗಮನದ ಗೌರವಾರ್ಥ ಔತಣಕೂಟವನ್ನು ಆಯೋಜಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ಉನ್ನತ ಮಟ್ಟದ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಧಾನಿಯೊಂದಿಗಿನ ಮಾತುಕತೆಗಳ ಜೊತೆಗೆ, ಯುವರಾಜ ಶೇಖ್ ಹಮ್ದಾನ್ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ.
ನವದೆಹಲಿಯಲ್ಲಿ ಕಾರ್ಯಕ್ರಮಗಳ ನಂತರ, ಶೇಖ್ ಹಮ್ದಾನ್ ಏಪ್ರಿಲ್ 8 ರಿಂದ 9 ರವರೆಗೆ ಮುಂಬೈಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಉನ್ನತ ಭಾರತೀಯ ಮತ್ತು ಎಮಿರೇಟ್ಸ್ ಉದ್ಯಮಿಗಳನ್ನು ಒಳಗೊಂಡ ದುಂಡುಮೇಜಿನ ವ್ಯಾಪಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದುಂಡುಮೇಜಿನ ಸಭೆಯಲ್ಲಿ ಮೂಲಸೌಕರ್ಯ ಮತ್ತು ಇಂಧನದಂತಹ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಮತ್ತು ಫಿನ್ ಟೆಕ್, ನಾವೀನ್ಯತೆ ಮತ್ತು ಸುಸ್ಥಿರತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯಾಪಾರ ಮತ್ತು ಹೂಡಿಕೆಯ ಅವಕಾಶಗಳ ಬಗ್ಗೆ ಚರ್ಚೆಗಳು ನಡೆಯಲಿವೆ.