ವಾಷಿಂಗ್ಟನ್: ಪರಮಾಣು ಒಪ್ಪಂದ ಕುರಿತು ಅಮರಿಕ ಇರಾನ್ ಜೊತೆ ನೇರ ಮಾತುಕತೆ ನಡೆಸಲಿದೆ. ಈ ವೇಳೆ, ಅವರಿಗೆ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮ ತ್ಯಜಿಸುವಂತೆ ಮನವೊಲಿಸಲಾಗುವುದು. ಒಂದು ವೇಳೆ ಅವರು ಒಪ್ಪದೇ ಹೋದಲ್ಲಿ ದೊಡ್ಡ ಅಪಾಯಕ್ಕೆ ಸಿಲುಕಲಿದ್ದಾರೆ ಎಂದು ಡೋನಾಲ್ಡ್ ಟ್ರಂಪ್ ಇರಾನ್ಗೆ ಎಚ್ಚರಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿ ಬಳಿಕ ಮಾತನಾಡಿದ ಟ್ರಂಪ್, ಈ ಕುರಿತು ಶನಿವಾರ ಮಾತುಕತೆ ಆರಂಭವಾಗಲಿದೆ. ಟೆಹ್ರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಿಲ್ಲ. ಈ ಕುರಿತು ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು. ಇರಾನ್ ಮೇಲಿನ ಅಮೆರಿಕ ಕಾರ್ಯಾಚರಣೆ ಕುರಿತು ವಿಶ್ವಸಂಸ್ಥೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇತ್ತೀಚಿಗೆ ಟ್ರಂಪ್ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಪತ್ರವನ್ನು ಬರೆದು, ನೇರ ಮಾತುಕತೆಗೆ ಮುಂದಾಗುವಂತೆ ತಿಳಿಸಿದ್ದರು. ಈಗಾಗಲೇ ಇರಾನ್ ಟ್ರಂಪ್ ಅವರ ಮೊದಲ ಮನವಿಯನ್ನು ತಿರಸ್ಕರಿಸಿದ್ದು, ಪರೋಕ್ಷ ಮಾತುಕತೆ ಸಾಧ್ಯತೆ ಕುರಿತ ಮಾತುಗಳು ಕೇಳಿ ಬರುತ್ತಿವೆ. ಆದರೆ, ಟ್ರಂಪ್ ಮಾತ್ರ ಇರಾನ್ಗೆ ನಿರಂತವಾಗಿ ಮಾತುಕತೆಗೆ ಒಪ್ಪದಿದ್ದರೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದು, ಪ್ರತೀಕಾರದ ವಾರ್ನಿಂಗ್ ಕೊಟ್ಟಿದ್ದಾರೆ.
ಟ್ರಂಪ್ ಮೊದಲ ಆಡಳಿತಾವಧಿಯಲ್ಲೇ, ಡೆಮಾಕ್ರಟಿಕ್ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತ ಅವಧಿಯಲ್ಲಿ ಇರಾನ್ ಜೊತೆ ನಡೆಸಿದ್ದ ಐತಿಹಾಸಿಕ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿತ್ತು. ಇರಾನ್ ಜೊತೆಗಿನ ಒಪ್ಪಂದಕ್ಕೆ ಟ್ರಂಪ್ ನಡೆಸುತ್ತಿರುವ ಪ್ರಯತ್ನಕ್ಕೆ ಇಸ್ರೇಲ್ ಪ್ರಧಾನಿ ಬೆಂಬಲಿಸಿದ್ದು, ಇಸ್ರೇಲ್ ಮತ್ತು ಅಮೆರಿಕ, ಇರಾನ್ ಯಾವುದೇ ಪರಮಾಣು ಅಭಿವೃದ್ಧಿ ಮಾಡದಂತೆ ನೋಡಿಕೊಳ್ಳುವ ಗುರಿ ಹೊಂದಿರುವುದಾಗಿ ತಿಳಿಸಿದೆ.
ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿರುವ ನೇರ ಸಭೆಯು ಉನ್ನತ ಮಟ್ಟದಲ್ಲಿ ನಡೆಯಲಿದ್ದು, ಈ ಮಾತುಕತೆಗಾಗಿ ಹಾಗೂ ಸೂಕ್ಷ್ಮ ರಾಜತಾಂತ್ರಿಕ ಮಾತುಕತೆಯಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಮಧ್ಯಪ್ರಾಚ್ಯದ ಸುಲ್ತಾನ್ ಒಮಾನ್ ಇದರ ನೇತೃತ್ವ ವಹಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.