image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇರಳದಲ್ಲಿ ಕ್ಯಾಥೋಲಿಕ್​ ಚರ್ಚ್​ಗಳ ಆಸ್ತಿಯ ಬಗ್ಗೆ ಆರ್​​ಎಸ್​ಎಸ್​​ ಮುಖವಾಣಿ ಆರ್ಗನೈಸರ್​​ ಪ್ರಕಟಿಸಿದ ಲೇಖನದಿಂದ ಸೃಷ್ಟಿಯಾದ ವಿವಾದ

ಕೇರಳದಲ್ಲಿ ಕ್ಯಾಥೋಲಿಕ್​ ಚರ್ಚ್​ಗಳ ಆಸ್ತಿಯ ಬಗ್ಗೆ ಆರ್​​ಎಸ್​ಎಸ್​​ ಮುಖವಾಣಿ ಆರ್ಗನೈಸರ್​​ ಪ್ರಕಟಿಸಿದ ಲೇಖನದಿಂದ ಸೃಷ್ಟಿಯಾದ ವಿವಾದ

ಕೇರಳ : ವಕ್ಫ್​ ತಿದ್ದುಪಡಿ ಮಸೂದೆಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿರುವ ನಡುವೆ, ಆರ್​​ಎಸ್​ಎಸ್​ನ ಮುಖವಾಣಿಯಾದ ಆರ್ಗನೈಸರ್​ ಕ್ಯಾಥೋಲಿಕ್​ ಚರ್ಚ್​ಗಳ ಬಗ್ಗೆ ಪ್ರಕಟಿಸಿದ ಲೇಖನವು ಕೇರಳದಲ್ಲಿ ವಿವಾದ ಎಬ್ಬಿಸಿದೆ. ಈ ಬಗ್ಗೆ ಪರ- ವಿರೋಧವೂ ಉಂಟಾಗಿದೆ.

ಭಾರತದಲ್ಲಿ ಕ್ಯಾಥೋಲಿಕ್ ಚರ್ಚ್‌ನ ಭೂ ನಿಯಂತ್ರಣ ಬಗ್ಗೆ ಆರ್ಗನೈಸರ್‌ನಲ್ಲಿ ಲೇಖನ ಪ್ರಕಟವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ, ಅವನ್ನು ಅಶಕ್ತರನ್ನಾಗಿ ಮಾಡುವುದು ಸಂಘ ಪರಿವಾರದ ಕಾರ್ಯಸೂಚಿ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟೀಕಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ತಕ್ಷಣ, ಕ್ಯಾಥೋಲಿಕ್ ಚರ್ಚ್‌ನ ಭೂಮಿಯ ಮಾಲೀಕತ್ವದ ಕುರಿತು ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನವು ಅಲ್ಪಸಂಖ್ಯಾತರ ಬಗ್ಗೆ ಸಂಘ ಪರಿವಾರ ಹೊಂದಿರುವ ನಿಲುವನ್ನು ತೋರಿಸುತ್ತದೆ. ಲೇಖನವನ್ನು ಹಿಂತೆಗೆದುಕೊಳ್ಳಲಾಗಿದ್ದರೂ, ಅಲ್ಪಸಂಖ್ಯಾತರು ಮತ್ತು ಅವರ ಸಂಸ್ಥೆಗಳನ್ನು ಪ್ರತ್ಯೇಕಿಸುವ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ಸಂಚು ಇದಾಗಿದೆ. ಇದರ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ ಎಂದು ಕರೆ ನೀಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕತ್ವವು ಆರ್ಗನೈಸರ್ ಲೇಖನದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಆಗ್ರಹಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ನಿಲ್ಲಿಸಬೇಕು. ದೇಶವು ಅಪಾಯಕಾರಿ ಪರಿಸ್ಥಿತಿಯತ್ತ ಸಾಗುತ್ತಿದೆ. ವಕ್ಫ್ ಮಸೂದೆಗೆ ತಿದ್ದುಪಡಿ ತಂದಂತೆ, ಮುಂದೆ ಚರ್ಚ್​ಗಳ ಮೇಲಿನ ನಿಯಂತ್ರಣಕ್ಕೂ ಬಿಜೆಪಿ ಕಾನೂನು ತರಲಿದೆ ಎಂದು ಆರೋಪಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಮುಸ್ಲಿಮರ ನಂತರ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿದೆ. ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರ ಸರ್ಕಾರವು ವಿಭಜಕ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಲೇಖನ ಹಿಂಪಡೆದಿದ್ದನ್ನು ಸಮರ್ಥಿಸಿಕೊಂಡರು. ಯಾವುದೇ ಸಮುದಾಯಗಳ ಬಗ್ಗೆ ನಿಯಂತ್ರಣ ಸಾಧಿಸುವುದು ಸರ್ಕಾರದ ಉದ್ದೇಶವಲ್ಲ. ಚರ್ಚ್​ಗಳು ವಕ್ಫ್ ಸಂಸ್ಥೆಯಂತೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ ಎಂಬುದನ್ನು ಒಪ್ಪುತ್ತೇವೆ ಎಂದಿದ್ದಾರೆ.

 

Category
ಕರಾವಳಿ ತರಂಗಿಣಿ