image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್​ ತಿದ್ದುಪಡಿ ವಿಧೇಯಕವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಮ್​ ಆದ್ಮಿ ಪಕ್ಷದ ಸದಸ್ಯರು .....

ವಕ್ಫ್​ ತಿದ್ದುಪಡಿ ವಿಧೇಯಕವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಮ್​ ಆದ್ಮಿ ಪಕ್ಷದ ಸದಸ್ಯರು .....

ನವದೆಹಲಿ: ವಕ್ಫ್ (ತಿದ್ದುಪಡಿ)ವಿಧೇಯಕ(waqf amendment) 2025 ಅನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿವೆ. ಆಮ್ ಆದ್ಮಿ ಪಕ್ಷದ ಓಖ್ಲಾ ಶಾಸಕ ಮತ್ತು ದೆಹಲಿ ವಕ್ಫ್ ಬೋರ್ಡ್(waqf board) ಅಧ್ಯಕ್ಷ ಅಮಾನತುಲ್ಲಾ ಖಾನ್ ವಿಧೇಯಕವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ(supreme court) ಅರ್ಜಿ ಸಲ್ಲಿಸಿದ್ದಾರೆ.

ಈ ಮಸೂದೆಯು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಗೆ ಭಂಗ ತಂದಿದೆ. ಅಲ್ಪಸಂಖ್ಯಾತರು ತಮ್ಮದೇ ಆದ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಅಮಾನತುಲ್ಲಾ ಖಾನ್ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಇದಕ್ಕೂ ಮುನ್ನ, ಬಿಹಾರದ ಕಿಶನ್‌ಗಂಜ್‌ನ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್(mohammed javed) ಅವರು ವಕ್ಫ್ ತಿದ್ದುಪಡಿ ಮಸೂದೆಯ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಮಸೂದೆಗೆ ಸಂಬಂಧಿಸಿದಂತೆ ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದರು. ಇದಲ್ಲದೇ ಇತರ ನಾಯಕರು ಕೂಡ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವಕ್ಫ್ ತಿದ್ದುಪಡಿ ವಿಧೇಯಕದ ಅಡಿ ಹೊಸ ಕಾನೂನು ಜಾರಿಗೆ ಬಂದರೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದ ಆಸ್ತಿಯನ್ನು ಅಧಿಕೃತವಾಗಿ ನೋಂದಾಯಿಸದಿದ್ದರೆ, ಆರು ತಿಂಗಳ ನಂತರ ಮಂಡಳಿಯು ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲ. ವರದಿಗಳ ಪ್ರಕಾರ, ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯದಾದ ಹಲವು ವಕ್ಫ್‌ಗಳು ಸರಿಯಾದ ದಾಖಲೆಗಳನ್ನು ಹೊಂದಿಲ್ಲ. ಆದ್ದರಿಂದ, ವಕ್ಫ್ ತನ್ನ ನೋಂದಣಿಯಾಗದ ಮಸೀದಿಗಳು, ಶಾಲೆಗಳು ಮತ್ತು ಸ್ಮಶಾನಗಳು ಸಹ ಕಾನೂನು ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಅವರೆಲ್ಲ ಈಗ ಭೀತಿಗೊಳಗಾಗಿದ್ದಾರೆ.

ಈ ವಕ್ಫ್ ತಿದ್ದುಪಡಿ ವಿಧೇಯಕವು ಸೆಕ್ಷನ್ 107ನ್ನು ರದ್ದುಪಡಿಸುವ ಅವಕಾಶ ನೀಡುತ್ತದೆ ಮತ್ತು ವಕ್ಫ್ ಬೋರ್ಡ್ ಮಿತಿ ಕಾಯಿದೆ 1963 ರ ವ್ಯಾಪ್ತಿಗೆ ತರುತ್ತದೆ. ಈ ಕಾಯಿದೆಯು ಈಗ ವಕ್ಫ್ ಆಸ್ತಿಯ ಮೇಲಿನ ಹಕ್ಕುಗಳಿಗೆ ಅನ್ವಯಿಸುತ್ತದೆ ಮತ್ತು ಸುದೀರ್ಘ ದಾವೆಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ತಿದ್ದುಪಡಿ ಅಡಿ ವಕ್ಫ್ ಮಸೂದೆಯ ಸೆಕ್ಷನ್ 40 ಅನ್ನು ತೆಗೆದುಹಾಕುವುದರೊಂದಿಗೆ, ವಕ್ಫ್ ಮಂಡಳಿಗಳು ಆಸ್ತಿಗಳನ್ನು ವಕ್ಫ್ ಎಂದು ಘೋಷಿಸುವುದನ್ನು ನಿರ್ಬಂಧಿಸಲಿದೆ.

ವಕ್ಫ್ ತಿದ್ದುಪಡಿ ವಿಧೇಯಕ 2025 ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿದೆ. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ನಂತರ ಈ ಮಸೂದೆ ಕಾನೂನಾಗಲಿದ್ದು, ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸುವುದರೊಂದಿಗೆ ಇಡೀ ದೇಶದಲ್ಲಿ ಜಾರಿಯಾಗಲಿದೆ.

ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ವಕ್ಫ್ ಮಸೂದೆ ಬೆಂಬಲಿಸಿ 288 ಮತಗಳು ಚಲಾವಣೆಗೊಂಡರೆ, ವಿರೋಧವಾಗಿ 232 ಮತಗಳು ಬಂದಿವೆ. ಇನ್ನು ರಾಜ್ಯಸಭೆಯಲ್ಲಿ ವಿಧೇಯಕ ಬೆಂಬಲಿಸಿ 128 ಮತಗಳು ಚಲಾವಣೆಗೊಂಡರೆ, ಅದರ ವಿರುದ್ಧ 95 ಮತಗಳು ಬಿದ್ದವು. ಈ ಮೂಲಕ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.

Category
ಕರಾವಳಿ ತರಂಗಿಣಿ