ಅಮೆರಿಕ : ಇತ್ತೀಚೆಗೆ ಅಂತರಾಷ್ಟ್ರೀಯ ಮಾಧ್ಯಮಗಳು ವಿಶ್ವದ ಶ್ರೀಮಂತ ಮತ್ತು ಉದ್ಯಮಿ ಎಲೋನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಗ್ಗೆ ಸಂಚಲನಕಾರಿ ಸುದ್ದಿಗಳನ್ನು ಬಿತ್ತರಿಸಿದ್ದವು. ಟ್ರಂಪ್ ಆಡಳಿತದಿಂದ ಮಸ್ಕ್ ದೂರ ಸರಿಯಲಿದ್ದಾರೆ ಎಂಬ ವರದಿಗಳು ಎಲ್ಲೆಡೆ ಕುತೂಹಲ ಮೂಡಿಸಿತ್ತು. ಈ ಸುದ್ದಿಯನ್ನು ಮಸ್ಕ್ ಖಂಡಿಸಿದ್ದಾರೆ.
ಅಮೆರಿಕ ಸರ್ಕಾರಿ ಸಲಹೆಗಾರರಾಗಿರುವ ಎಲಾನ್ ಮಸ್ಕ್ ಶೀಘ್ರದಲ್ಲೇ DOGE ಜವಾಬ್ದಾರಿಗಳಿಂದ ಕೆಳಗಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮಸ್ಕ್ ಆ ಜವಾಬ್ದಾರಿಗಳಿಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ. ಈ ವಿಷಯವನ್ನು ಡೊನಾಲ್ಡ್ ಟ್ರಂಪ್ ತಮ್ಮ ಮೂವರು ಆಪ್ತ ಸಹಾಯಕರೊಂದಿಗೆ ಸಂಪುಟಕ್ಕೆ ತಿಳಿಸಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಎಲ್ಲ ಊಹಾಪೋಹಕ್ಕೆ ತೆರೆ ಎಳೆದಿರುವ ಮಸ್ಕ್, ''ಇದೆಲ್ಲ ಫೇಕ್ ನ್ಯೂಸ್'' ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಪೊಲಿಟಿಕೊ ವರದಿಯ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕ್ಯಾಬಿನೆಟ್ನ ಸರ್ಕಾರಿ ದಕ್ಷತೆಯ ಇಲಾಖೆಯ (DOGE) ಮುಖ್ಯಸ್ಥ ಸ್ಥಾನದಿಂದ ಮಸ್ಕ್ ಕೆಲವೇ ವಾರಗಳಲ್ಲಿ ಹೊರಹೋಗಲಿದ್ದಾರೆ ಎಂದು ತಿಳಿಸಿದ್ದಾರೆ ಅಂತಾ ಮಾಧ್ಯಮಗಳು ಬಿತ್ತರಿಸಿದ್ದವು. ಆದರೆ ಮಸ್ಕ್ ಮತ್ತು ಶ್ವೇತಭವನ ಈ ಹೇಳಿಕೆಯನ್ನು ನಿರಾಕರಿಸಿದ್ದು, ಅವರ ಕೆಲಸ ಪೂರ್ಣಗೊಳ್ಳುವವರೆಗೆ ತಮ್ಮ ಸ್ಥಾನವನ್ನು ತೊರೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.