ಬ್ಯಾಂಕಾಕ್: ಥಾಯ್ಲೆಂಡ್(Thailand) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(narendra modi) ಶುಕ್ರವಾರ ಬಾಂಗ್ಲಾದೇಶದ(Bangladesh) ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್(mohammed younus) ಅವರನ್ನು ಭೇಟಿಯಾಗಿದ್ದಾರೆ. ಕಳೆದ ಆಗಸ್ಟ್ನಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ(sheikh haseena) ಪದಚ್ಯುತಿ ಬಳಿಕ ಈ ಇಬ್ಬರು ನಾಯಕರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.
ಬ್ಯಾಂಕಾಕ್ನಲ್ಲಿನ ಬಿಮ್ಸ್ಟೆಕ್(bimstek) ಶೃಂಗಸಭೆಯಲ್ಲಿ ಈ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್(jai Shankar) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಕೂಡ ಉಪಸ್ಥಿತರಿದ್ದರು. ಬಾಂಗ್ಲಾದೇಶ ಮುಂದಿನ ಬಿಮ್ಸ್ಟೆಕ್ ಶೃಂಗಸಭೆಯ ಅತಿಥ್ಯ ವಹಿಸಿಕೊಳ್ಳಲಿದೆ. ಬಾಂಗ್ಲಾದೇಶದ ಜೊತೆಗೆ ಭಾರತದ ಸಂಬಂಧ ಸೂಕ್ಷ್ಮವಾಗಿರುವ ಹೊತ್ತಿನಲ್ಲಿ ಈ ಸಭೆ ನಡೆದಿರುವುದು ಗಮನ ಸೆಳೆದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯೂನಸ್ ಕಚೇರಿ, ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬ್ಯಾಂಕಾಕ್ನ 6ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದೆ.
ಗುರುವಾರ ಥಾಯ್ಲೆಂಡ್ ಪ್ರಧಾನಿ ಪ್ರಸೆರ್ಟ್ ಜಂತರರು ಬಿಮ್ಸ್ಟಕ್ ಶೃಂಗಸಭೆಗೆ ಆಹ್ವಾನಿತರಾಗಿರುವ ವಿವಿಧ ದೇಶದ ನಾಯಕರು ಮತ್ತು ಅಧಿಕಾರಿಗಳಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಇಬ್ಬರು ನಾಯಕರು ಭಾಗಿಯಾಗಿದ್ದರು. ಈ ಕುರಿತು ಹಂಚಿಕೊಂಡ ಫೋಟೋದಲ್ಲಿ ಯೂನಸ್ ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿಯೇ ಆಸೀನರಾಗಿದ್ದರು.
2024ರ ಆಗಸ್ಟ್ನಲ್ಲಿ ಹಸೀನಾ ಸರ್ಕಾರ ಪದಚ್ಯುತಗೊಳಿಸಿದ ಬಳಿಕ ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಾಂಗ್ಲಾದ ಹಿಂದೂಗಳನ್ನು ಗುರಿಯಾಗಿಸಿ ನಡೆಸುತ್ತಿರುವ ಬಗ್ಗೆ ಕೇಂದ್ರ ಕಳವಳ ವ್ಯಕ್ತಪಡಿಸಿದ್ದು, ಭಾರತ ಮತ್ತು ಬಾಂಗ್ಲಾದ ಸಂಬಂಧದಲ್ಲಿ ಕುಸಿತವೂ ಕಂಡಿದೆ. ಈ ನಡುವೆ ಕಳೆದ ವಾರ ಯೂನಸ್ ಬಿಜೀಂಗ್ಗೆ ಭೇಟಿ ನೀಡಿದ್ದು, ಆರ್ಥಿಕ ಸಹಾಯದ ವಿಸ್ತರಣೆಗೆ ಕೋರಿದ್ದರು. ಈ ವೇಳೆ ಭಾರತದ ಈಶಾನ್ಯ ಭಾರತದ ರಾಜ್ಯಗಳಿಗೆ ಸಮುದ್ರಕ್ಕೆ ದಾರಿ ಇಲ್ಲ. ನಮ್ಮ ಮಾರ್ಗದ ಮೂಲಕವೇ ಅವರು ಬರಬೇಕು ಎಂಬ ಹೇಳಿಕೆ ಮೂಲಕ ವಿವಾದ ಮೂಡಿಸಿದ್ದಾರೆ.