ನವದೆಹಲಿ: ಉತ್ತರ ಪ್ರದೇಶದಲ್ಲಿ ಮನೆಗಳನ್ನು ತೆರವುಗೊಳಿಸುತ್ತಿರುವುದು 'ಅಕ್ರಮ' ಹಾಗೂ 'ಅಮಾನವೀಯ' ಎಂದು ಸುಪ್ರೀಂ ಕೋರ್ಟ್(supreme court) ಮಂಗಳವಾರ ಪ್ರಯಾಗ್ರಾಜ್(prayagraj) ಅಭಿವೃದ್ಧಿ ಪ್ರಾಧಿಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿತು.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಒಕಾ ಹಾಗೂ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ."ಇದು ನಮ್ಮ ಆತ್ಮಸಾಕ್ಷಿಗೆ ಆಘಾತ ಉಂಟುಮಾಡುತ್ತಿದೆ. ಆಶ್ರಯ ಪಡೆಯುವ ಹಕ್ಕು ಎನ್ನುವುದಿದೆ. ಜೊತೆಗೆ, ತೆರವಿಗೆ ಕಾನೂನು ಪ್ರಕ್ರಿಯೆಗಳಿವೆ" ಎಂದು ಹೇಳಿರುವ ಪೀಠ, ಐದೂ ಮನೆ ಮಾಲೀಕರಿಗೆ ಆರು ವಾರಗಳೊಳಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಪ್ರಾಧಿಕಾರಕ್ಕೆ ನಿರ್ದೇಶಿಸಿತು.
ಮನೆ ತೆರವು ಕ್ರಮವನ್ನು 'ಉಗ್ರ' ಹಾಗೂ 'ಅಮಾನವೀಯ' ರೀತಿಯಲ್ಲಿ ನಡೆಸಲಾಗಿದೆ. ದೇಶದಲ್ಲಿ ಕಾನೂನು ನಿಯಮಗಳು ಇರುವುದರಿಂದ ನಾಗರಿಕರ ವಸತಿ ವ್ಯವಸ್ಥೆಗಳನ್ನು ಈ ರೀತಿ ಕೆಡವಲು ಸಾಧ್ಯವಿಲ್ಲ ಎಂದು ಪೀಠ ಖಾರವಾಗಿ ಹೇಳಿದೆ. ಅರ್ಜಿದಾರರು(petetioner) ತಮ್ಮ ಮನೆಗಳನ್ನು ಕಳೆದುಕೊಂಡಿದ್ದು, ಪ್ರತಿ ಪ್ರಕರಣದಲ್ಲೂ ಪರಿಹಾರ ನಿಗದಿಪಡಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕೋರ್ಟ್ ನಿರ್ದೇಶಿಸಿದೆ.
ಆಶ್ರಯ ಪಡೆಯುವ ಹಕ್ಕು ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗ ಎಂಬುದನ್ನು ಅಧಿಕಾರಿಗಳು ಮತ್ತು ವಿಶೇಷವಾಗಿ ಅಭಿವೃದ್ಧಿ ಪ್ರಾಧಿಕಾರವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ. ಸೂಕ್ತ ಕಾರ್ಯವಿಧಾನವನ್ನು ಅನುಸರಿಸದೆ ವಕೀಲರು, ಪ್ರಾಧ್ಯಾಪಕರು ಮತ್ತು ಇತರ ಮೂವರ ಮನೆಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು.