ಚೆನ್ನೈ: ಎಟಿಎಂಗಳಿಂದ ಉಚಿತ ವಿತ್ ಡ್ರಾ ಮಿತಿಯ ನಂತರದ ವಿತ್ ಡ್ರಾ ಶುಲ್ಕವನ್ನು 21 ರೂಪಾಯಿಯಿಂದ 23 ರೂಪಾಯಿಗೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಅನುಮತಿ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇಂದ್ರದ ಡಿಜಿಟಲೀಕರಣ ಕ್ರಮಗಳು ಬಡವರನ್ನು ಸಾಂಸ್ಥಿಕವಾಗಿ ಲೂಟಿ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರವು ಆರಂಭದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ನಾಗರಿಕರನ್ನು ಪ್ರೋತ್ಸಾಹಿಸಿದರೂ, ನಂತರ ಅದು ಡಿಮಾನೆಟೈಸೇಶನ್ ಮಾಡಿತು ಮತ್ತು ಡಿಜಿಟಲ್ ಇಂಡಿಯಾ ಅಭಿಯಾನವನ್ನು ಉತ್ತೇಜಿಸಿತು ಎಂದು ಅವರು ಹೇಳಿದರು. ಆದರೆ ಅದಾದ ನಂತರ ಡಿಜಿಟಲ್ ವಹಿವಾಟಿನ ಮೇಲಿನ ಶುಲ್ಕಗಳನ್ನು ಹೆಚ್ಚಿಸಲಾಯಿತು, ಕಡಿಮೆ ಬ್ಯಾಲೆನ್ಸ್ಗೆ ದಂಡ ವಿಧಿಸಲಾಯಿತು ಮತ್ತು ಈಗ ಎಟಿಎಂ ವಿತ್ ಡ್ರಾ ಶುಲ್ಕಗಳನ್ನು ಹೆಚ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
ಇಂತಹ ಕ್ರಮಗಳಿಂದ ಜನತೆ ತಮಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚು ಹಣ ವಿತ್ ಡ್ರಾ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಹಾಗೂ ಇದು ವಿಶೇಷವಾಗಿ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ಗುಂಪುಗಳಿಗೆ ಹಾನಿ ಮಾಡುತ್ತದೆ ಎಂದು ಸಿಎಂ ಸ್ಟಾಲಿನ್ ಎಚ್ಚರಿಸಿದರು.
ಎಟಿಎಂ ಶುಲ್ಕಗಳ ಹೆಚ್ಚಳವು ಈಗಾಗಲೇ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ನಂಥ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಮೇಲೆ ಮತ್ತು ತಮಿಳುನಾಡಿನ ಕಲೈನಾರ್ ಮಗಲಿರ್ ಉರಿಮೈ ತಿಟ್ಟಂ ಅಡಿಯಲ್ಲಿ ನಗದು ವರ್ಗಾವಣೆ ಪಡೆಯುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಗಮನಸೆಳೆದರು.
ಈವರೆಗೆ ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕಿನಿಂದ ಐದು ಉಚಿತ ವಿತ್ ಡ್ರಾ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೆ 21 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಈ ಮೊತ್ತವನ್ನು ಈಗ 23 ರೂಪಾಯಿಗೆ ಹೆಚ್ಚಿಸಲಾಗಿದೆ.
ಶುಕ್ರವಾರ ಹೊರಡಿಸಿದ ಆರ್ಬಿಐ ಸುತ್ತೋಲೆಯ ಪ್ರಕಾರ, ಗ್ರಾಹಕರು ತಮ್ಮ ಸ್ವಂತ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ ಐದು ಉಚಿತ ಎಟಿಎಂ ವಹಿವಾಟುಗಳನ್ನು (ಹಣಕಾಸು ಮತ್ತು ಆರ್ಥಿಕೇತರ ವಹಿವಾಟುಗಳನ್ನು ಒಳಗೊಂಡಂತೆ) ಮಾಡಬಹುದು. ಹೆಚ್ಚುವರಿಯಾಗಿ, ಅವರು ಇತರ ಬ್ಯಾಂಕುಗಳಲ್ಲಿ ಉಚಿತ ಎಟಿಎಂ ವಹಿವಾಟುಗಳಿಗೆ ಅರ್ಹರಾಗಿದ್ದಾರೆ. ಮೆಟ್ರೋ ನಗರಗಳಲ್ಲಿ ಮೂರು ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಐದು ಉಚಿತ ಎಟಿಎಂ ವಹಿವಾಟು ನಡೆಸಲು ಅವಕಾಶವಿದೆ.