ಪಾಟ್ನಾ: ಈ ಹಿಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ)ವನ್ನು ಎರಡು ಬಾರಿ ತೊರೆದು ತಪ್ಪು ಮಾಡಿದ್ದೆ, ಆದರೆ ಮತ್ತೊಮ್ಮೆ ಅಂಥ ತಪ್ಪು ಮಾಡಲಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಬಹಿರಂಗವಾಗಿಯೇ ಹೇಳಿದ್ದಾರೆ.
ಇಲ್ಲಿನ ಬಾಪು ಸಭಾಂಗಣದಲ್ಲಿ ಸಹಕಾರ ಇಲಾಖೆಯ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್, ಎನ್ಡಿಎ ತೊರೆದು ತಾವು ಹಿಂದೆ ತಪ್ಪು ಮಾಡಿದ್ದೆ ಎಂದು ಒಪ್ಪಿಕೊಂಡರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಉಪಸ್ಥಿತರಿದ್ದರು ಎಂಬುದು ಗಮನಾರ್ಹ.
"ಅಮಿತ್ ಶಾ ಅವರ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾದ ಅನೇಕ ಯೋಜನೆಗಳಿಂದ ಬಿಹಾರವು ಪ್ರಯೋಜನ ಪಡೆದಿದೆ ಮತ್ತು ಇವು ರಾಷ್ಟ್ರವ್ಯಾಪಿ ಜನರಿಗೆ ಸಹಾಯ ಮಾಡಿವೆ" ಎಂದು ನಿತೀಶ್ ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್, 2005 ಕ್ಕಿಂತ ಮೊದಲು ಈ ಇಬ್ಬರೂ ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸಿದ್ದರು ಎಂದು ಆರೋಪಿಸಿದರು. ಅವರ ಆಡಳಿತದಲ್ಲಿ ಜನರು ಸಂಜೆಯ ನಂತರ ತಮ್ಮ ಮನೆಗಳಿಂದ ಹೊರಬರಲು ಹೆದರುತ್ತಿದ್ದರು. ಆದರೆ ಈಗ ನಮ್ಮ ಆಡಳಿತದಲ್ಲಿ ಪರಿಸ್ಥಿತಿಗಳು ಬದಲಾಗಿವೆ ಎಂದು ಹೇಳಿದರು.
ಜೀವಿಕಾ ಯೋಜನೆಯನ್ನು ತಮ್ಮ ಸರ್ಕಾರದ ಪ್ರಮುಖ ಸಾಧನೆ ಎಂದು ಶ್ಲಾಘಿಸಿದ ಸಿಎಂ ನಿತೀಶ್, ಅದರ ಯಶಸ್ಸನ್ನು ಮನಗಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೂಡ ಅಜೀವಿಕಾ ಯೋಜನೆಯನ್ನು ರಾಷ್ಟ್ರವ್ಯಾಪಿ ಜಾರಿಗೆ ತಂದಿತ್ತು ಎಂದು ನುಡಿದರು.
ಪಾಟ್ನಾದಲ್ಲಿ ನಡೆದ ಸಹಕಾರ ಇಲಾಖೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸಚಿವ ಶಾ, ರಾಜ್ಯದಲ್ಲಿ ಬಹುಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿಯೇ ಸ್ಪರ್ಧಿಸಲಿದೆ ಎಂದು ಸಚಿವ ಶಾ ಘೋಷಿಸಿದರು.
ಬಿಹಾರದಲ್ಲಿ ಮತ್ತಷ್ಟು ಅಭಿವೃದ್ಧಿ ಮತ್ತು ಸ್ಥಿರತೆಯ ಭರವಸೆ ನೀಡಿದ ಶಾ, ಎನ್ಡಿಎಯನ್ನು ಭಾರಿ ಬಹುಮತದೊಂದಿಗೆ ಮರು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ, ಜಲಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಮತ್ತು ಎನ್ಡಿಎಯ ಅನೇಕ ನಾಯಕರು ಉಪಸ್ಥಿತರಿದ್ದರು.