ಪಾಕಿಸ್ತಾನ: ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಲೂಚಿಸ್ತಾನ ಪ್ರಾಂತ್ಯದ ಹಲವಾರು ಜಿಲ್ಲೆಗಳ ಪ್ರಮುಖ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಬಲೂಚಿಸ್ತಾನ ಸರ್ಕಾರ ಆದೇಶ ಹೊರಡಿಸಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ. ಇದರಿಂದ ನಾಗರಿಕರು ರಾತ್ರಿ ಹೊತ್ತಿನಲ್ಲಿ ಹೆದ್ದಾರಿಗಳಲ್ಲಿ ಸಂಚರಿಸುವುದು ಸಂಪೂರ್ಣವಾಗಿ ಬಂದ್ ಆಗಲಿದೆ.
ಪ್ರಾಂತ್ಯದಾದ್ಯಂತ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿಗಳು ಹೆಚ್ಚಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪ್ರಯಾಣಿಕರ ಮೇಲೆ ಅನೇಕ ಮಾರಣಾಂತಿಕ ಘಟನೆಗಳು ನಡೆದಿರುವುದು ಗಮನಾರ್ಹ.
ಗ್ವಾದರ್, ಕಛಿ, ಝೋಬ್, ನೊಶ್ಕಿ ಮತ್ತು ಮುಸಾಖೇಲ್ ಜಿಲ್ಲೆಗಳಲ್ಲಿ ರಾತ್ರಿಯ ಸಮಯದಲ್ಲಿ ಪ್ರಯಾಣವನ್ನು ನಿರ್ಬಂಧಿಸಿ ಅಧಿಕಾರಿಗಳು ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದ್ದಾರೆ. ಹಾಗೆಯೇ ಕ್ವೆಟ್ಟಾದಿಂದ ರಾತ್ರಿ ಸಮಯದಲ್ಲಿ ಯಾವುದೇ ಸಂಚಾರಕ್ಕೆ ಅನುಮತಿ ಇರುವುದಿಲ್ಲ ಎಂದು ಕ್ವೆಟ್ಟಾ ಆಡಳಿತ ನಿರ್ದೇಶನ ನೀಡಿದೆ.
ಈ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ವೆಟ್ಟಾ ಆಯುಕ್ತ ಹಮ್ಜಾ ಶಫ್ಕತ್ ಮಾತನಾಡಿ, "ಬಲೂಚಿಸ್ತಾನವನ್ನು ಸಿಂಧ್ ನೊಂದಿಗೆ ಸಂಪರ್ಕಿಸುವ ಕರಾಚಿ-ಕ್ವೆಟ್ಟಾ ಹೆದ್ದಾರಿಯಲ್ಲಿ (ಎನ್ -25) ರಾತ್ರಿ ಪ್ರಯಾಣವನ್ನು ನಿಷೇಧಿಸಲು ನಿರ್ಧರಿಸಲಾಯಿತು" ಎಂದು ಹೇಳಿದರು.
ಈ ಕ್ರಮಗಳಿಂದ ಪ್ರಯಾಣದ ವಿಳಂಬವನ್ನು ತಡೆಗಟ್ಟಲು, ಸಮಯೋಚಿತ ನಿರ್ಗಮನ ಮತ್ತು ಆಗಮನವನ್ನು ಖಚಿತಪಡಿಸಿಕೊಳ್ಳಲು ಸಾರಿಗೆ ವೇಳಾಪಟ್ಟಿಯನ್ನು ಸರಿಹೊಂದಿಸಬೇಕು ಎಂದು ಅಧಿಕಾರಿಗಳು ಒತ್ತಿಹೇಳಿದ್ದಾರೆ.
"ಎಲ್ಲಾ ಬಸ್ಸುಗಳು ಮತ್ತು ರೈಲು ಬೋಗಿಗಳಲ್ಲಿ ಟ್ರ್ಯಾಕರ್ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಬಗ್ಗೆ ಸಾರಿಗೆ ನಿರ್ವಾಹಕರು ಸರ್ಕಾರದೊಂದಿಗೆ ಸಹಕರಿಸುವಂತೆ ತಿಳಿಸಲಾಗಿದೆ" ಎಂದು ಶಫ್ಕತ್ ಹೇಳಿದರು.
ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಅವರ ಪ್ರಕಾರ, ಜನವರಿ 1 ರಿಂದ ವಿವಿಧ ಕಾರಣಗಳಿಗಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು 76 ಬಾರಿ ಮುಚ್ಚಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಹಿಂಸಾಚಾರದ ಮಧ್ಯೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಇತ್ತೀಚಿನ ಭಯೋತ್ಪಾದಕ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಗುರುತಿಸಲಾಗಿದೆ. ಇತ್ತೀಚೆಗೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಗ್ವಾದರ್ನ ಕರಾವಳಿ ಹೆದ್ದಾರಿಯನ್ನು ಬಂದ್ ಮಾಡಿ, ಕರಾಚಿಗೆ ತೆರಳುತ್ತಿದ್ದ ಬಸ್ನಲ್ಲಿದ್ದ ಆರು ಪ್ರಯಾಣಿಕರನ್ನು ಹೊರಗೆಳೆದು ಅವರನ್ನು ಕೊಂದು ಹಾಕಿದ್ದರು. ಮೃತರೆಲ್ಲರೂ ಪಂಜಾಬ್ ಮೂಲದವರು.