image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮ್ಯಾನ್ಮಾರ್​ನಲ್ಲಿ ಮತ್ತೆ ಲಘು ಭೂಕಂಪನ ....

ಮ್ಯಾನ್ಮಾರ್​ನಲ್ಲಿ ಮತ್ತೆ ಲಘು ಭೂಕಂಪನ ....

ನವದೆಹಲಿ: ಪ್ರಕೃತಿಯ ರಕ್ಕಸತನದಿಂದ ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿರುವ ಮ್ಯಾನ್ಮಾರ್‌​ನಲ್ಲಿ ಇಂದು (ಶನಿವಾರ) ಮತ್ತೆ ಭೂಮಿ ಕಂಪಿಸಿದೆ. ಮಧ್ಯಾಹ್ನ 2.50 ರ ಸುಮಾರಿನಲ್ಲಿ ಭೂಮಿ ಅಲುಗಾಡಿದ್ದು, ರಿಕ್ಟರ್​ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ ಎಂದು ತನ್ನ ಎಕ್ಸ್​ ಖಾತೆಯಲ್ಲಿ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೋಸ್ಟ್​ ಹಂಚಿಕೊಂಡಿದೆ. ಶುಕ್ರವಾರವಷ್ಟೇ 7.7 ರ ತೀವ್ರತೆಯಲ್ಲಿ ಭೂಮಿ ಕಂಪಿಸಿ ಮುಗಿಲೆತ್ತರದ ಕಟ್ಟಡಗಳು, ಸೇತುವೆಗಳು ನೆಲಸಮವಾಗಿದ್ದವು. ಇದರ ಬೆನ್ನಲ್ಲೇ ಮತ್ತೆ ಪ್ರಕೃತಿ ಮುನಿದಿದೆ.

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1 ಸಾವಿರ ಗಡಿದ ದಾಟಿದೆ. 2,376 ಜನರು ಗಾಯಗೊಂಡಿದ್ದಾರೆ. ಕುಸಿದ ಹಲವಾರು ಕಟ್ಟಡಗಳ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಪ್ರಕೃತಿ ಮುನಿಸಿಗೆ ತುತ್ತಾಗಿರುವ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ಟೆಂಟ್‌ಗಳು, ಹೊದಿಕೆಗಳು, ನೆಲ ಹಾಸಿಗೆಗಳು, ಆಹಾರ ಪೊಟ್ಟಣಗಳು, ನೈರ್ಮಲ್ಯ ಕಿಟ್‌ಗಳು, ಜನರೇಟರ್‌ಗಳು ಮತ್ತು ಅಗತ್ಯ ಔಷಧಗಳು ಸೇರಿದಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಮೊದಲ ಕಂತಿನಲ್ಲಿ ಯಾಂಗೂನ್‌ಗೆ ರವಾನಿಸಿದೆ. ಇಂದು ಬೆಳಿಗ್ಗೆ ಭಾರತದ ರಾಯಭಾರಿ ಅಭಯ್ ಠಾಕೂರ್ ಅವರು ಯಾಂಗೂನ್ ಮುಖ್ಯಮಂತ್ರಿ ಯು ಸೋ ಥೀನ್ ಅವರಿಗೆ ಇವೆಲ್ಲವನ್ನೂ ಹಸ್ತಾಂತರಿಸಿದರು.

ಮಂಡಲಯ್​​ನಲ್ಲಿ ಭಾರತವು ಫೀಲ್ಡ್​ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ. ಇದಕ್ಕಾಗಿ ವೈದ್ಯರು ಮತ್ತು ಶುಶ್ರೂಷರು ಸೇರಿದಂತೆ 118 ತಜ್ಞರ ತಂಡ ಇಂದು ಸಂಜೆ ಅಲ್ಲಿಗೆ ಹೊರಡಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎರಡು ವಿಮಾನಗಳು ಮತ್ತು 80 ಜನರ ಎನ್‌ಡಿಆರ್‌ಎಫ್ ತಂಡವನ್ನೂ ಮಯನ್ಮಾರ್‌ಗೆ ಕಳುಹಿಸಲಾಗಿದೆ. ಇತ್ತ ಥಾಯ್ಲೆಂಡ್​ನಲ್ಲೂ ಕೂಡ ಭೂಕಂಪನ ಉಂಟಾಗಿದ್ದು, ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿಯೂ ನಡುಕ ಸಂಭವಿಸಿದೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ