ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೆರ್ಲಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಹಿರಿಯ ನಕ್ಸಲ್ ನಾಯಕ ಸೇರಿದಂತೆ ಕನಿಷ್ಠ 16 ಜನ ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಜಿಲ್ಲಾ ಮೀಸಲು ಪಡೆ (DRG) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ತಂಡ ಜಂಟಿ ಕಾರ್ಯಾಚರಣೆ ನಡೆಸಿದ್ದು, ನಕ್ಸಲರು ಹಾಗೂ ಪೊಲೀಸರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು.
ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ಕೈಗೊಂಡಿರುವ ಸುಕ್ಮಾ ಎಸ್ಪಿ ಕಿರಣ್ ಚವಾಣ್ ಅವರು ಮಾಹಿತಿ ನೀಡಿ, "ನಾವು ಇದುವರೆಗೆ 16 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಂಡಿದ್ದೇವೆ. ಜೊತೆಗೆ AK-47, SLR, INSAS ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ" ಎಂದು ತಿಳಿಸಿದರು.
ಮೂಲಗಳ ಪ್ರಕಾರ, ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಪಡೆ ಎಲ್ಲಾ ಕಡೆಯಿಂದಲೂ ನಕ್ಸಲರನ್ನು ಸುತ್ತುವರಿದಿದೆ. ಆದ್ದರಿಂದ ನಕ್ಸಲರ ಪಡೆ ದೊಡ್ಡ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಎನ್‌ಕೌಂಟರ್ ಮುಗಿದ ಬಳಿಕ ಶೋಧ ಕಾರ್ಯಾಚರಣೆ ನಂತರ ಸಾವನ್ನಪ್ಪಿರುವ ನಕ್ಸಲರ ನಿಖರವಾದ ಸಂಖ್ಯೆಯನ್ನು ಹೇಳಲಾಗುವುದು ಎಂದು ಅವರು ತಿಳಿಸಿದರು.
2026 ರ ಮಾರ್ಚ್ 31ರೊಳಗೆ ದೇಶದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಭರವಸೆ ನೀಡಿದ ನಂತರ ಸುಕ್ಮಾದಲ್ಲಿ ನಡೆದ ಮೂರನೇ ಎನ್‌ಕೌಂಟರ್ ಇದಾಗಿದೆ.