ಕೋಲ್ಕತ್ತಾ: "ನಮ್ಮ ಸರ್ಕಾರ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ಸಮಾಜದ ಎಲ್ಲ ವರ್ಗದ ಕಲ್ಯಾಣ ನಮ್ಮ ಗುರಿ. ಇದುವೇ ನಮ್ಮ ಆಡಳಿತದ ಮಾದರಿ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೆಲ್ಲಾಗ್ ಕಾಲೇಜಿನಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುವುದರ ಕುರಿತು ಮಾತನಾಡುತ್ತಾ, "ವಿಭಜನೆಯು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದರು.
"ನನ್ನ ಸಾವಿಗೂ ಮುನ್ನ ನಾನು ಒಗ್ಗಟ್ಟನ್ನು ನೋಡಬೇಕು. ಒಗ್ಗಟ್ಟೇ ನಮ್ಮ ಬಲ, ವಿಭಜನೆ ನಮ್ಮನ್ನು ಕೆಳಗೆ ತಳ್ಳುತ್ತದೆ. ಇದು ಸ್ವಾಮಿ ವಿವೇಕಾನಂದರ ನಂಬಿಕೆಯೂ ಹೌದು. ಜನರನ್ನು ಸದಾ ಒಗ್ಗೂಡಿಸಿಕೊಂಡಿರುವುದು ಕಷ್ಟದ ಕೆಲಸ. ಆದರೆ, ವಿಭಜನೆ ಮಾಡುವುದಕ್ಕೆ ಕ್ಷಣಾರ್ಧ ಸಾಕು. ಜಗತ್ತು ಇಂತಹ ವಿಭಜಕ ತತ್ವದೊಂದಿಗಿರಲು ಸಾಧ್ಯವೇ" ಎಂದು ಪ್ರಶ್ನಿಸಿದರು.
"ನಾನು ಅಧಿಕಾರದಲ್ಲಿರುವವರೆಗೆ ಸಮಾಜವನ್ನು ವಿಭಜಿಸಲು ಸಾಧ್ಯವಿಲ್ಲ. ನಾನು ದುರ್ಬಲ ಮತ್ತು ಬಡ ವರ್ಗದವರನ್ನು ನೋಡಬೇಕಿದೆ. ಅವರಿಗಾಗಿ ನಾವು ಕಷ್ಟಪಟ್ಟು ದುಡಿಯಬೇಕು. ಇದೇ ವೇಳೆ ನಾವು ಎಲ್ಲಾ ಧರ್ಮ, ಜಾತಿಯ ಜನರಿಗೆ ಕೆಲಸ ಮಾಡಬೇಕಿದ್ದು ಒಟ್ಟಾಗಿ ಮುಂದುವರೆಯಲು ಸಹಾಯ ಮಾಡಬೇಕಿದೆ" ಎಂದರು.
ಪಶ್ಚಿಮ ಬಂಗಾಳದಲ್ಲಿ ಸಾಮಾಜಿಕ ಅಭಿವೃದ್ಧಿ, ಬಾಲಕಿಯರು, ಮಕ್ಕಳು ಮತ್ತು ಮಹಿಳಾ ಸಬಲೀಕರಣದ ಕುರಿತು ಅವರು ಮಾತನಾಡಿದರು. "ಪಶ್ಚಿಮ ಬಂಗಾಳ ವೈವಿಧ್ಯತೆಯಿಂದ ಕೂಡಿದ್ದು, ಎಲ್ಲಾ ಹಬ್ಬಗಳನ್ನು ಯಾವುದೇ ತಾರತಮ್ಯವಿಲ್ಲದೆ ಒಟ್ಟಾಗಿ ಆಚರಿಸುತ್ತೇವೆ" ಎಂದರು.
"ನಮ್ಮ ರಾಜ್ಯದಲ್ಲಿ 11 ಕೋಟಿ ಜನರಿದ್ದಾರೆ. ಶೇ 33ರಷ್ಟು ಮುಸ್ಲಿಮರು, ಕ್ರಿಶ್ಚಿಯನ್, ಬೌದ್ಧರು ಮತ್ತು ಗೂರ್ಖ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯ ನಮ್ಮಲ್ಲಿದೆ. ಶೇ.6ರಷ್ಟು ಬುಡಕಟ್ಟು ಜನರು, ಶೇ.23ರಷ್ಟು ಪರಿಶಿಷ್ಟ ಜಾತಿಗಳಿವೆ. ಎಲ್ಲಾ ಜಾತಿ, ಮತ ಮತ್ತು ಧರ್ಮದ ಜನರು ಪರಸ್ಪರ ಪ್ರೀತಿಸುತ್ತಾರೆ" ಎಂದು ತಿಳಿಸಿದ್ದಾರೆ.
ಮಾನವ-ಕೇಂದ್ರಿತ ವಿಧಾನದ ಅಗತ್ಯವನ್ನು ಒತ್ತಿ ಹೇಳಿದ ಮಮತಾ ಬ್ಯಾನರ್ಜಿ, "ವಿದ್ಯಾರ್ಥಿಗಳು, ಮಹಿಳೆ, ರೈತರು ಮತ್ತು ಕಾರ್ಮಿಕರ ನಡುವೆ ಯಾವುದೇ ತಾರತಮ್ಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ನಾವು ಎಲ್ಲರೂ ಮನುಷ್ಯರು ಎಂಬುದನ್ನು ಪರಿಗಣಿಸಬೇಕಿದೆ. ಮಾನವೀಯತೆಯ ಹೊರತಾಗಿ ಜಗತ್ತು ನಡೆಯುವುದಿಲ್ಲ, ಮುಂದುವರೆಯುವುದಿಲ್ಲ ಎಂಬುದನ್ನು ನಾನು ನಂಬಿದ್ದೇನೆ" ಎಂದರು.