ಉತ್ತರ ಪ್ರದೇಶ : ಲಕ್ನೋ, ಸಂಭಾಲ್, ಅಲಿಗಢ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ರಸ್ತೆಗಳು, ಅಪಾಯಕಾರಿ ಕಟ್ಟಡಗಳ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ.ಸಂಭಾಲ್ ಎಸ್ಪಿ ಸಂಸದ ಜಿಯಾವುರ್ ರೆಹಮಾನ್ ಬರ್ಕೆ ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ನಮಾಜ್‌ಗೆ ಸಂಬಂಧಿಸಿದಂತೆ ಎಸ್‌ಪಿ ಸಂಸದ ಜಿಯಾವುರ್ ರಹಮಾನ್ ಬರ್ಕೆ ಅವರು ಹೈಕೋರ್ಟ್‌ಗೆ ಹೋಗಿದ್ದಾರೆ.ಎಸ್‌ಪಿ ಸಂಸದರ ತೀಕ್ಷ್ಣ ಪ್ರತಿಕ್ರಿಯೆಯ ನಂತರ, ಇದೀಗ ಎಎಸ್‌ಪಿ ಸಂಭಾಲ್ ಶ್ರೀಶ್ ಚಂದ್ರ ಅವರು ರಸ್ತೆಗಳು ಮತ್ತು ಮೇಲ್ಛಾವಣಿಗಳಲ್ಲಿ ನಮಾಜ್ ಅನ್ನು ನಿಷೇಧಿಸುವ ಆದೇಶದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಭಾಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಅವರು, ಮಸೀದಿ, ನಿಗದಿತ ಸ್ಥಳ, ಬಯಲು ಪ್ರದೇಶಗಳಲ್ಲಿ ನಮಾಜ್ ಮಾಡಲು ನಿಷೇಧವಿಲ್ಲ. ರಸ್ತೆಗಳು, ಅಪಾಯಕಾರಿ ಕಟ್ಟಡಗಳ ಮೇಲೆ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.ರಸ್ತೆಗಳ ಮೇಲೆ ಜನರು ಸೇರಿಸಿದಾಗ ಅಪಘಾತ ಉಂಟಾಗುವ ಸಾಧ್ಯತೆ ಇರುತ್ತದೆ. ಅಪಾಯಕಾರಿ ಕಟ್ಟಡಗಳ ಮೇಲೆ ಜನರು ಒಗ್ಗೂಡುವುದರಿಂದಲೂ ಅಪಾಯವಿರುತ್ತದೆ. ಯಾವುದೇ ಅವಘಡಗಳು ಸಂಭವಿಸದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಕುರಿತು ಸಂಭಾಲ್ನಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಗಿದೆ. ಜನರಿಗೆ ಮಾಹಿತಿ ನೀಡಲಾಗಿದೆ. ಸಹಜ ಪ್ರಾರ್ಥನೆಯ ಮೇಲೆ ಯಾವುದೇ ನಿರ್ಬಂಧ ಇಲ್ಲ. ಕೋಮುಗಲಭೆಯಿಂದಾಗಿ ಸಂಭಾಲ್ನಲ್ಲಿ ಬಿಗುವಿನ ವಾತಾವರಣವಿದೆ. ಯಾವುದೇ ಗಲಭೆ ನಡೆಯದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗುವುದು ಎಂದರು.