image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹುರಿಯತ್ ಕಾನ್ಫರೆನ್ಸ್​ನೊಂದಿಗೆ ಸಂಯೋಜಿತವಾಗಿದ್ದ ಮತ್ತೆರಡು ಸಂಘಟನೆಗಳು ಪ್ರತ್ಯೇಕತಾವಾದದಿಂದ ಹಿಂದೆ !

ಹುರಿಯತ್ ಕಾನ್ಫರೆನ್ಸ್​ನೊಂದಿಗೆ ಸಂಯೋಜಿತವಾಗಿದ್ದ ಮತ್ತೆರಡು ಸಂಘಟನೆಗಳು ಪ್ರತ್ಯೇಕತಾವಾದದಿಂದ ಹಿಂದೆ !

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಹುರಿಯತ್ ಕಾನ್ಫರೆನ್ಸ್​ನೊಂದಿಗೆ ಸಂಯೋಜಿತವಾಗಿದ್ದ ಮತ್ತೆರಡು ಸಂಘಟನೆಗಳು ಪ್ರತ್ಯೇಕತಾವಾದದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿವೆ.

ಜೆ &ಕೆ ತಹ್ರೀಕಿ ಇಸ್ತಾಕ್ ಲಾಲ್ ಮತ್ತು ಜೆ &ಕೆ ತಹ್ರೀಕ್ - ಇ - ಇಸ್ತಿಕಾಮತ್ ಈ ಎರಡು ಸಂಘಟನೆಗಳು ಪ್ರತ್ಯೇಕತಾವಾದವನ್ನು ತ್ಯಜಿಸಿರುವುದಾಗಿ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ "ನವ ಭಾರತದ" ದೃಷ್ಟಿಕೋನದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿವೆ. ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಗೃಹ ಮಂತ್ರಿ ಅಮಿತ್ ಶಾ, ಇದು ಈ ಪ್ರದೇಶದಲ್ಲಿ ಪ್ರತ್ಯೇಕತಾವಾದದ ಪ್ರಭಾವ ಕಡಿಮೆಯಾಗುತ್ತಿರುವುದರ ಪ್ರತಿಬಿಂಬವಾಗಿದೆ ಎಂದು ಹೇಳಿದರು.

"ಕಾಶ್ಮೀರ ಕಣಿವೆಯಿಂದ ಮತ್ತೊಂದು ಒಳ್ಳೆಯ ಸುದ್ದಿ ಬಂದಿದೆ. ಹುರಿಯತ್ ನೊಂದಿಗೆ ಸಂಯೋಜಿತವಾಗಿರುವ ಗುಂಪುಗಳಾದ ಜೆ &ಕೆ ತಹ್ರೀಕಿ ಇಸ್ತಾಕ್ ಲಾಲ್ ಮತ್ತು ಜೆ &ಕೆ ತಹ್ರೀಕ್-ಇ-ಇಸ್ತಿಕಾಮತ್ ಪ್ರತ್ಯೇಕತಾವಾದವನ್ನು ತ್ಯಜಿಸಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಭಾರತದಲ್ಲಿ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿವೆ. ಮೋದಿ ಸರ್ಕಾರದ ಅಡಿ ಪ್ರತ್ಯೇಕತಾವಾದವು ಕೊನೆಯ ಹಂತದಲ್ಲಿದೆ ಮತ್ತು ಏಕತೆಯ ವಿಜಯವು ಕಾಶ್ಮೀರದಾದ್ಯಂತ ಪ್ರತಿಧ್ವನಿಸುತ್ತಿದೆ" ಎಂದು ಶಾ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಗುರಿಯಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಕೊನೆಗೊಳಿಸುವ ಮತ್ತು ಶಾಶ್ವತ ಶಾಂತಿಯನ್ನು ಪುನಃಸ್ಥಾಪಿಸುವ ಸರ್ಕಾರದ ಪ್ರಯತ್ನಗಳಿಗೆ ಈ ಬೆಳವಣಿಗೆಯನ್ನು ಪ್ರಮುಖ ಯಶಸ್ಸು ಎಂದು ನೋಡಲಾಗುತ್ತಿದೆ. ಹುರಿಯತ್ ಕಾನ್ಫರೆನ್ಸ್​ಗೆ ಸಂಯೋಜಿತವಾಗಿರುವ ಎರಡು ಗುಂಪುಗಳು ಈ ಹಿಂದೆ ಸಂಘಟನೆಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಘೋಷಿಸಿದ್ದವು. ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ ಮತ್ತು ಡೆಮಾಕ್ರಟಿಕ್ ಪೊಲಿಟಿಕಲ್ ಮೂವ್ ಮೆಂಟ್ ಮಾರ್ಚ್ 25 ರಂದು ಪ್ರತ್ಯೇಕತಾವಾದಿ ಸಂಘಟನೆಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ತಿಳಿಸಿದ್ದವು.

ಪ್ರಮುಖ ಕಾಶ್ಮೀರಿ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ನೇತೃತ್ವದ ಅವಾಮಿ ಕ್ರಿಯಾ ಸಮಿತಿ ಮತ್ತು ಶಿಯಾ ನಾಯಕ ಮಸ್ರೂರ್ ಅಬ್ಬಾಸ್ ಅನ್ಸಾರಿ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಇತ್ತೆಹಾದುಲ್ ಮುಸ್ಲಿಮೀನ್ ಎಂಬ ಎರಡು ಸಂಘಟನೆಗಳನ್ನು ರಾಷ್ಟ್ರ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯ ಕಳೆದ ಮಾರ್ಚ್​ 11 ರಂದು ಐದು ವರ್ಷಗಳ ಕಾಲ ನಿಷೇಧ ಹೇರಿತ್ತು.

 

Category
ಕರಾವಳಿ ತರಂಗಿಣಿ