ಜಮ್ಮು ಕಾಶ್ಮೀರ: ಕಳೆದ ನಾಲ್ಕು ದಿನಗಳಿಂದ ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಸಾಗುತ್ತಿದ್ದು, ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಾನಗರ ಕಾರ್ಯಾಚರಣೆಯಿಂದ 30 ಕಿ.ಮೀ ದೂರದಲ್ಲಿರುವ ರಾಜ್‌ಬಾಗ್‌ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದ ಬಳಿ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಕುರಿತು ಮಾಹಿತಿ ಸಿಕ್ಕಿದ್ದು ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಎರಡು ಕಡೆಯಿಂದಲೂ ಗುಂಡಿನ ದಾಳಿ ನಡೆದಿದ್ದು, ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಹಿರಾನಗರ ಸೆಕ್ಟರ್ನಲ್ಲಿ ಒಂದೂವರೆ ಗಂಟೆ ನಡೆದ ಗುಂಡಿನ ದಾಳಿಯಲ್ಲಿನ ಭಯೋತ್ಪಾದಕರ ಗುಂಪೇ ಇಂದಿನ ಗುಂಡಿನ ಚಕಮಕಿಯಲ್ಲೂ ಭಾಗಿಯಾಗಿದೆ. ಇವರು ಗಡಿಯಾಚೆಯಿಂದ ಹೊಸದಾಗಿ ರಚಿಸಲಾದ ಸುರಂಗದ ಮೂಲಕ ನುಸುಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದೋಕ್ನಲ್ಲಿ ಭಯೋತ್ಪಾದಕರು ಇರುವ ಕುರಿತು ಗುಪ್ತಚರ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರು, ಸೇನೆ, ಎನ್ಎಸ್ಜಿ, ಬಿಎಸ್ಎಫ್ ಮತ್ತು ಸಿಆರ್ಪಿಎಫ್ ಈ ಬೃಹತ್ ಕಾರ್ಯಾಚರಣೆಯಲ್ಲಿ ಶಸ್ತ್ರಸಜ್ಜಿತರಾಗಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ, ತಾಂತ್ರಿಕ ಮತ್ತು ಹೆಲಿಕಾಪ್ಟರ್, ಡ್ರೋನ್ ಮತ್ತು ಬುಲೆಟ್ ಪ್ರೂಫ್, ಸ್ನೈಫರ್ ಶ್ವಾನಗಳು ಭಯೋತ್ಪಾದಕರ ಪತ್ತೆ ಕಾರ್ಯದಲ್ಲಿ ಭಾಗಿಯಾಗಿವೆ.
ಭದ್ರತಾ ಪಡೆ ಬಿಲ್ಲವಾರ್ ಅರಣ್ಯದಲ್ಲಿ ವಿಶೇಷವಾಗಿ ಶೋಧಕಾರ್ಯ ನಡೆಸುತ್ತಿದ್ದು, ಭಯೋತ್ಪಾದಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುರಾನಗರದಲ್ಲಿ ನಡೆದ ಶೋಧದಲ್ಲಿ ಎಂ4 ಕಾರ್ಬೈನ್ ಮ್ಯಾಗಜಿನ್, ಎರಡು ಗ್ರೆನೇಡ್, ಬುಲೆಟ್ಪ್ರೂಫ್ ಜಾಕೆಟ್, ಸ್ಲೀಪಿಂಗ್ ಬ್ಯಾಗ್, ಟ್ರಾಕ್ಸೂಟ್ ಮತ್ತು ಅನೇಕ ತಿನ್ನುವ ವಸ್ತುಗಳು ಹಾಗೂ ಸುಧಾರಿತ ಸ್ಪೋಟಕ ಸಾಧನ ತಯಾರಿಸಲು ಬೇಕಾದ ಸಾಮಗ್ರಿಗಳಿದ್ದ ಪಾಲಿಥಿನ್ ಬ್ಯಾಗ್ಗಳು ಪತ್ತೆಯಾಗಿದ್ದವು.
ಡಿಜಿಪಿ ನಳಿನ್ ಪ್ರಭಾತ್ ನೇತೃತ್ವದಲ್ಲಿ ತಂಡ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ಜಮ್ಮು ವಲಯದ ಐಜಿಪಿ ಭೀಮ್ ಸೆನ್ ತುತಿ ನೇತೃತ್ವದ ತಂಡವೂ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ.