ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮತ್ತು ಆಪ್ ನಾಯಕಿ ಅತಿಶಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಪ್ರತಿಪಕ್ಷ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಅತಿಶಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಜ್ಯೋತಿ ಸಿಂಗ್ ಚುನಾವಣಾ ಆಯೋಗ, ದೆಹಲಿ ಪೊಲೀಸರು ಮತ್ತು ಅತಿಶಿ ಚುನಾವಣೆಯಲ್ಲಿ ಗೆಲುವು ಕಂಡ ವಿಧಾನಸಭಾ ಕ್ಷೇತ್ರ ಕಲ್ಕಾಜಿ ಚುನಾವಣಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ಕುರಿತು ಮುಂದಿನ ವಿಚಾರಣೆಯನ್ನು ಜುಲೈ 30ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಎಎಪಿ ನಾಯಕಿ, ದೆಹಲಿ ಮಾಜಿ ಸಿಎಂ ಅತಿಶಿ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಕಮಲ್ಜಿತ್ ಸಿಂಗ್ ದುಗ್ಗಲ್ ಮತ್ತು ಆಯುಷ್ ರಾಣಾ ಎಂಬುವರು ಅತಿಶಿ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಕೀಲರಾದ ಟಿ ಸಿಂಗ್‌ದೇವ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಈ ಚುನಾವಣೆಯಲ್ಲಿನ ಅತಿಶಿ ಗೆಲುವನ್ನು ಅಸಿಂಧು ಎಂದು ಘೋಷಿಸುವಂತೆ ಕೋರಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಇಂದು ಕೋರ್ಟ್ ಕೈಗೆತ್ತಿಕೊಂಡಿತು.
ಈ ಅರ್ಜಿ ವಿಚಾರಣೆ ವೇಳೆ ಭಾರತೀಯ ಚುನಾವಣಾ ಆಯೋಗ ಮತ್ತು ರಿಟರ್ನಿಂಗ್ ಅಧಿಕಾರಿಗಳು ಅರ್ಜಿಯಲ್ಲಿ ಪಕ್ಷಗಳಾಗಿ ಸೇರಿಸಿದ್ದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದರು.
ಫೆ. 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಫೆ. 8ರಂದು ಹೊರಬಿದ್ದಿತ್ತು. ಕಲ್ಕಾಜಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಅತಿಶಿ ತಮ್ಮ ಎದುರಾಳಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ 3,521 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅತಿಶಿ ವಿರುದ್ಧ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಲ್ಕಾಜಿ ಕ್ಷೇತ್ರದ ನಿವಾಸಿಗಳಾಗಿದ್ದಾರೆ.