ಬಿಹಾರ : ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳೂ ಗರಿಗೆದರಿವೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರುವ ನಿರೀಕ್ಷೆಯಲ್ಲಿವೆ.
ಸದ್ಯ ರಂಜಾನ್ ಆಚರಣೆ ನಡೆಯುತ್ತಿದೆ. ಸಿಎಂ ನಿತೀಶ್ ಕುಮಾರ್ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಮುಸ್ಲಿಂ ಸಂಘಟನೆಯೊಂದು ಘೋಷಿಸಿದೆ. ಇದಕ್ಕೆ ರಾಜಕೀಯ ಕಾರಣ ನೀಡಿದೆ.
ಇಂದು ಮುಖ್ಯಮಂತ್ರಿ ನಿವಾಸದಲ್ಲಿ ನಡೆಯುವ ಇಫ್ತಾರ್ ಕೂಟದ ಆಹ್ವಾನವನ್ನು ತಿರಸ್ಕರಿಸಿದ್ದಾಗಿ ಇಮಾರತ್ ಶರಿಯಾ ಹೇಳಿದೆ. ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ವಕ್ಫ್ ಮಸೂದೆಯನ್ನು ಜೆಡಿಯು ಬೆಂಬಲಿಸಿದ್ದರಿಂದ ಸಿಎಂ ಆಯೋಜಿಸಿರುವ ಕೂಟದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಅನುಯಾಯಿಗಳನ್ನು ಹೊಂದಿದ್ದಾಗಿ ಹೇಳಿಕೊಳ್ಳುವ ಸಂಘಟನೆ ತಿಳಿಸಿದೆ.
ಮುಸ್ಲಿಮರ ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಇನ್ನಷ್ಟು ಹದಗೆಡಿಸುವ ಬೆದರಿಕೆ ಹಾಕುವ ವಕ್ಫ್ ಮಸೂದೆಗೆ ನಿತೀಶ್ ಕುಮಾರ್ ಬೆಂಬಲ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೀವು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜಾತ್ಯತೀತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ. ಆದರೆ, ಬಿಜೆಪಿಯೊಂದಿಗಿನ ಮೈತ್ರಿ ಮತ್ತು ಸಂವಿಧಾನಬಾಹಿರ ಮಸೂದೆಗೆ ಬೆಂಬಲ ನೀಡುವ ಮೂಲಕ ಬದ್ಧತೆಯ ವಿರುದ್ಧ ನಡೆದುಕೊಂಡಿದ್ದಾಗಿ ಶರಿಯಾ ಟೀಕಿಸಿದೆ.
ಈ ಇಫ್ತಾರ್ ಕೂಟವು 'ಟೋಕನಿಸಂ' ಆಗಿದೆ. ಮುಸ್ಲಿಮರ ಬಗೆಗಿನ ನಿಮ್ಮ ಅಸಡ್ಡೆ ಮತ್ತು ಔಪಚಾರಿಕ ಕಾರ್ಯಮ್ರಮಗಳು ಅರ್ಥಹೀನ. ಮತಕ್ಕಾಗಿ ಮಾತ್ರ ನಮ್ಮ ಸಮುದಾಯವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಸಂಘಟನೆ ಆರೋಪಿಸಿದೆ. ದೇಶಾದ್ಯಂತ "ಅವ್ಯಾಹತ"ವಾಗಿ, "ನಿಯಂತ್ರಣವಿಲ್ಲದೆ" ಆಸ್ತಿಯನ್ನು ಹೊಂದಿರುವ ವಕ್ಫ್ ಮಂಡಳಿಗೆ ಕಾನೂನು ನಿಯಮಗಳನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕೇಂದ್ರದ ಎನ್ಡಿಎ ಸರ್ಕಾರದ ಭಾಗವಾಗಿರುವ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಗಳು ಮಸೂದೆಯನ್ನು ಬೆಂಬಲಿಸಿವೆ.