image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಾಕಿ ಲಾಕಿ ಜ್ವಾಲಾಮುಖಿ ಸ್ಫೋಟ

ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಾಕಿ ಲಾಕಿ ಜ್ವಾಲಾಮುಖಿ ಸ್ಫೋಟ

ಜಕಾರ್ತಾ: ಇಂಡೋನೇಷ್ಯಾದ ದಕ್ಷಿಣ - ಮಧ್ಯ ಭಾಗದಲ್ಲಿರುವ ಮೌಂಟ್ ಲೆವೊಟೊಬಿ ಲಾಕಿ ಲಾಕಿ ಜ್ವಾಲಾಮುಖಿ ಶುಕ್ರವಾರ ಮೂರು ಬಾರಿ ಸ್ಫೋಟಗೊಂಡಿದ್ದು, ಆಕಾಶದಲ್ಲಿ 8,000 ಮೀಟರ್ ಎತ್ತರದವರೆಗೆ ಬೂದಿಯ ಹೊಗೆ ಚಿಮ್ಮಿದೆ. ಪೂರ್ವ ನುಸಾ ತೆಂಗರಾ ಪ್ರಾಂತ್ಯದ ದೂರದ ದ್ವೀಪ ಫ್ಲೋರೆಸ್​ನಲ್ಲಿರುವ ಜ್ವಾಲಾಮುಖಿಯಲ್ಲಿ ನೂರಾರು ಭೂಕಂಪಗಳು ಸಂಭವಿಸಿವೆ ಮತ್ತು ಕಳೆದ ಏಳು ದಿನಗಳಲ್ಲಿ ಸಕ್ರಿಯ ಜ್ವಾಲಾಮುಖಿ ಚಟುವಟಿಕೆ ಗಮನಾರ್ಹವಾಗಿ ಹೆಚ್ಚಾಗಿದೆ.

ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಮುಂಜಾನೆ ಮೂರು ಸ್ಫೋಟಗಳ ನಂತರ, ಜ್ವಾಲಾಮುಖಿ ಹಗಲಿನಲ್ಲಿ ಶಾಂತವಾಗಿತ್ತು. ವುಲಾಂಗಿಟಾಂಗ್​ನ ವೀಕ್ಷಣಾ ಪೋಸ್ಟ್​ನ ಮೇಲ್ವಿಚಾರಣೆ ವರದಿಯ ಪ್ರಕಾರ ಹಗಲಿನಲ್ಲಿ ಭೂಕಂಪನಗಳು ಕಡಿಮೆಯಾಗಿವೆ.

ಅಧಿಕಾರಿಗಳು ಸ್ಫೋಟದ ಎಚ್ಚರಿಕೆಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ್ದು, ಅಪಾಯದ ವಲಯವನ್ನು ಕುಳಿಯಿಂದ 7 ಕಿಲೋಮೀಟರ್ ನಿಂದ 8 ಕಿಲೋಮೀಟರ್ ಗೆ ವಿಸ್ತರಿಸಿದ್ದಾರೆ. ಪ್ರಸ್ತುತ ಈ ಪ್ರದೇಶದಿಂದ ನಿವಾಸಿಗಳನ್ನು ಸ್ಥಳಾಂತರಿಸಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಸ್ಫೋಟದಿಂದಾಗಿ ಹಲವಾರು ವಿಮಾನಯಾನ ಸಂಸ್ಥೆಗಳು ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ಪ್ರವಾಸಿ ದ್ವೀಪ ಬಾಲಿ ನಡುವಿನ ವಿಮಾನಗಳನ್ನು ರದ್ದುಗೊಳಿಸಿವೆ. ಇದರಿಂದ ದ್ವೀಪಕ್ಕೆ ಇತರ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಆಗಮನ ವಿಳಂಬವಾಗಿವೆ. ಭಾರಿ ಮಳೆಯಾಗುವ ಹಾಗೂ ಮಳೆ ನೀರಿನ ಮೂಲಕ ಜ್ವಾಲಾಮುಖಿಯ ಲಾವಾ ಹರಿದು ಬರುವ ಅಪಾಯವಿದೆ ಎಂದು ಇಂಡೋನೇಷ್ಯಾದ ಭೂವಿಜ್ಞಾನ ಸಂಸ್ಥೆ ಜನರಿಗೆ ಎಚ್ಚರಿಕೆ ನೀಡಿದೆ.

ನವೆಂಬರ್ ನಲ್ಲಿ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟಗೊಂಡು ಒಂಬತ್ತು ಜನ ಸಾವನ್ನಪ್ಪಿದ್ದರು ಮತ್ತು ಡಜನ್ ಗಟ್ಟಲೆ ಜನ ಗಾಯಗೊಂಡಿದ್ದರು. ಇಂಡೋನೇಷ್ಯಾ 270 ಮಿಲಿಯನ್ ಜನರ ದ್ವೀಪಸಮೂಹವಾಗಿದ್ದು, ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಿರುತ್ತವೆ. ದೇಶದಲ್ಲಿ 120 ಸಕ್ರಿಯ ಜ್ವಾಲಾಮುಖಿಗಳಿವೆ.

Category
ಕರಾವಳಿ ತರಂಗಿಣಿ