ಹರಿದ್ವಾರ: ಪ್ರಯಾಗ್ರಾಜ್ ಮಹಾಕುಂಭವನ್ನ ಮುಗಿಸಿ ನಿರಂಜನಿ ಅಖಾಡದ ಸಂತರು ಹರಿದ್ವಾರ ತಲುಪಿದ್ದಾರೆ. ಈ ವೇಳೆ ಸಂತರು ಹಾಗೂ ಋಷಿಮುನಿಗಳಿಗೆ ಹರಿದ್ವಾರದ ಜನರು ಹೂವಿನ ಹಾರ ಹಾಕಿ ಸ್ವಾಗತಿಸಿದ್ದಾರೆ.
ಈ ವೇಳೆ ನಿರಂಜನಿ ಅಖಾಡದ ಕಾರ್ಯದರ್ಶಿ ಹಾಗೂ ಅಖಾರ ಪರಿಷತ್ತಿನ ಅಧ್ಯಕ್ಷ ಶ್ರೀ ಮಹಂತ್ ರವೀಂದ್ರಪುರಿ ಮಾತನಾಡಿ, ಮಹಾಕುಂಭದ ಸಂದರ್ಭದಲ್ಲಿ ಅಖಾರದ ಎಲ್ಲ ಅಧಿಕಾರಿಗಳು, ಸಾಧು-ಸಂತರು ಕುಂಭ ಪ್ರದೇಶಕ್ಕೆ ತೆರಳಿ ಹೋಳಿ ನಂತರ ತಮ್ಮ ತಮ್ಮ ಸ್ಥಳಗಳಿಗೆ ತೆರಳಿ ಜವಾಬ್ದಾರಿಯನ್ನು ಪೂರೈಸುತ್ತಾರೆ. ಹರಿದ್ವಾರದ ಎಲ್ಲಾ ಋಷಿಮುನಿಗಳು ಮತ್ತು ಸಂತರು ಪ್ರಯಾಗ್ರಾಜ್ ಕುಂಭವನ್ನು ಮುಗಿಸಿ ಹರಿದ್ವಾರಕ್ಕೆ ಬಂದಿದ್ದಾರೆ. ಈ ವೇಳೆ ಅವರನ್ನ ಇಲ್ಲಿನ ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಯಾಗ್ರಾಜ್ ಮಹಾಕುಂಭ ಮುಗಿದ ನಂತರ ಇತರೆ ಕುಂಭಗಳ ಬಗ್ಗೆ ನಮ್ಮ ಕೆಲಸ ಆರಂಭವಾಗಲಿದೆ. 2027ರಲ್ಲಿ ಹರಿದ್ವಾರದಲ್ಲಿ ಅರ್ಧಕುಂಭ ನಡೆಯಲಿದೆ. ಇದಾದ ಬಳಿಕ ನಾಸಿಕ್ ಮತ್ತು ಉಜ್ಜಯಿನಿಯಲ್ಲೂ ಮಹಾಕುಂಭಗಳಿದ್ದು, ಇದೀಗ ನಿರಂಜನಿ ಅಖಾಡದ ಎಲ್ಲಾ ಅಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದರು.
ಅರ್ಧಕುಂಭಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತುಕತೆ ನಡೆದಿದೆ. ಹರಿದ್ವಾರದಲ್ಲಿ ನಡೆಯಲಿರುವ ಅರ್ಧಕುಂಭವನ್ನು ಕೂಡ ಮಹಾಕುಂಭದಂತೆ ಆಯೋಜಿಸಬೇಕು ಎಂದು ಮನವಿ ಮಾಡಿದ್ದೇವೆ. ಏಕೆಂದರೆ 2021ರಲ್ಲಿ ಕೊರೊನಾ ಅವಧಿಯು ಬಂದಿತ್ತು. ಇದರಿಂದಾಗಿ ಹರಿದ್ವಾರದಲ್ಲಿ ನಡೆದ ಮಹಾಕುಂಭದ ವೈಭವವು ಕಡಿಮೆಯಾಗಿತ್ತು. ಆದ್ದರಿಂದ 2027ರಲ್ಲಿ ನಡೆಯಲಿರುವ ಅರ್ಧಕುಂಭಕ್ಕೆ ಸಂಬಂಧಿಸಿದಂತೆ ಮೊದಲು ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು. ಅದರ ನಂತರ ಎಲ್ಲ ಅಖಾಡಗಳ ಸಭೆಯನ್ನು ಕರೆದು 2027 ರ ಕುಂಭವನ್ನು ಹೇಗೆ ನಡೆಸಬೇಕೆಂದು ನಿರ್ಧರಿಸಲಾಗುವುದು ಎಂದು ಹೇಳಿದರು.