ಛತ್ತೀಸ್‌ಗಢ : ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 22 ನಕ್ಸಲರನ್ನು ಹತ್ಯೆಗೈಯ್ಯಲಾಗಿದ್ದು, ಓರ್ವ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ತಾರ್ ವಿಭಾಗದ ಬಿಜಾಪುರ-ದಂತೇವಾಡ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಎನ್‌ಕೌಂಟರ್ ನಡೆದಿದೆ. ಇಲ್ಲಿ 18 ಮಂದಿ ನಕ್ಸಲರು ಸಾವನ್ನಪ್ಪಿದ್ದು, ಕೊರೊಸ್ಕೊಡೊ ಗ್ರಾಮದಲ್ಲಿ ಮತ್ತೊಂದು ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತ ಭದ್ರತಾ ಸಿಬ್ಬಂದಿ ಛತ್ತೀಸ್‌ಗಢ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಗೆ ಸೇರಿದವರಾಗಿದ್ದು, ಗಂಗಲೂರು ಪೊಲೀಸ್ ಠಾಣಾ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಿಂದ ನಾಲ್ವರು ನಕ್ಸಲರ ಮೃತದೇಹಗಳ ಜೊತೆಗೆ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅದಿಕಾರಿಗಳು ಹೇಳಿದ್ದಾರೆ. ಈ ನಡುವೆ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಕ್ಸಲರು ಐಇಡಿ ಸ್ಪೋಟಿಸಿದ್ದು, ಭದ್ರತಾ ಪಡೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸ್ಪೋಟದಲ್ಲಿ ಭದ್ರತಾ ಸಿಬ್ಬಂದಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಆದರೆ, ಮಣ್ಣು ಮತ್ತು ಧೂಳು ಅಪ್ಪಳಿಸಿ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಅಧಿಕಾರಿಯ ಕಣ್ಣಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಬುಜ್‌ಮದ್ ಪ್ರದೇಶದಲ್ಲಿ ಬೆಳಗಿನ ಜಾವ ಸುಮಾರು 3ಕ್ಕೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಘಟಕ ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಕೈಗೊಂಡಾಗ ಈ ದಾಳಿ ನಡೆದಿದೆ.