ನವದೆಹಲಿ: ಕಾರ್ಯಾಂಗ ಮತ್ತು ಪ್ರಧಾನ ಮಂತ್ರಿಗಳು ಮಾತ್ರ ಸೇರಿಕೊಂಡು ಭಾರತದ ಮಹಾಲೇಖಪಾಲರನ್ನು ನೇಮಕ ಮಾಡುವ ಪ್ರಸ್ತುತ ಪದ್ಧತಿಯು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಕೋರಿದೆ.
ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಹೆಸರಿನ ಎನ್ಜಿಒ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಎನ್ಜಿಒ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಇಲ್ಲಿ ಸಿಎಜಿ ಸಂಸ್ಥೆಯ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಉದ್ಭವಿಸಿದೆ ಮತ್ತು ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಂಥ ರಾಜ್ಯಗಳ ಸಿಎಜಿ ಲೆಕ್ಕಪರಿಶೋಧನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ, ವಿರೋಧ ಪಕ್ಷದ ನಾಯಕ (ಎಲ್ಒಪಿ) ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸ್ವತಂತ್ರ ಮತ್ತು ತಟಸ್ಥ ಆಯ್ಕೆ ಸಮಿತಿಯೊಂದಿಗೆ ಸಮಾಲೋಚಿಸಿ ಮತ್ತು ಪಾರದರ್ಶಕ ರೀತಿಯಲ್ಲಿ ರಾಷ್ಟ್ರಪತಿಗಳು ಮಹಾಲೇಖಪಾಲರನ್ನು ನೇಮಕ ಮಾಡುವುದನ್ನು ಕಡ್ಡಾಯಗೊಳಿಸಲು ನ್ಯಾಯಾಲಯ ನಿರ್ದೇಶನ ನೀಡುವಂತೆ ಪಿಐಎಲ್ನಲ್ಲಿ ಕೋರಲಾಗಿದೆ.
ಸಿಎಜಿ ನೇಮಕಾತಿಯ ನಿಯಮಗಳು ಮಾಹಿತಿ ಆಯೋಗಗಳು ಮತ್ತು ಕೇಂದ್ರ ವಿಚಕ್ಷಣಾ ಆಯೋಗ ಸೇರಿದಂತೆ ಇತರ ಸಂಸ್ಥೆಗಳ ನೇಮಕಾತಿಯಂತೆಯೇ ಇರಬೇಕು ಎಂದು ಅದು ಹೇಳಿದೆ.