ಹೈದರಾಬಾದ್ : ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಶನಿವಾರ ಬರೋಬ್ಬರಿ 60 ಜನ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರ ಮುಂದೆ ಶರಣಾದರು.
ಕೊಥಗುಡೆಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರ ಸಮ್ಮುಖದಲ್ಲಿ ಈ ಸಾಮೂಹಿಕ ಶರಣಾಗತಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಪಿ ರೋಹಿತ್ ರಾಜು ಮತ್ತು ಭದ್ರಾಚಲಂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಶರಣಾಗತಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಶರಣಾದ ಎಲ್ಲ ನಕ್ಸಲರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳನನ್ನು ನಿಭಾಯಿಸುತ್ತಿದ್ದರು. 60 ನಕ್ಸಲರ ಪೈಕಿ 16 ಮಹಿಳೆಯರು ಸೇರಿದ್ದಾರೆ. ಹಲವರು ಛತ್ತೀಸ್‌ಗಢದ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಕೊಥಗುಡೆಮ್ ಜಿಲ್ಲೆಯು ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ ಎಂದು ಪೊಲೀಸರು ತಿಳಿಸಿದರು.
ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರ್ಕಾರ ಕೈಗೊಂಡ ಪ್ರಯತ್ನಗಳೇ ಕಾರಣ. ರಾಜ್ಯ ಸರ್ಕಾರ ನೀಡುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳು ಮತ್ತು ಪುನರ್ವಸತಿ ಪ್ಯಾಕೇಜ್‌ಗಳ ಬಗ್ಗೆ ಅರಿವು ಮೂಡಿಸಿದ ಬಳಿಕ ನಕ್ಸಲರ ಶರಣಾಗತಿ ನಿರಂತರವಾಗಿದೆ. ಹಿಂಸಾಚಾರದ ಮಾರ್ಗವನ್ನು ತೊರೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತೇಜನಕಾರಿಯಾಗಿದೆ. ಶರಣಾದ ನಕ್ಸಲರಲ್ಲಿ ಒಬ್ಬರು ಉನ್ನತ ಹುದ್ದೆಯನ್ನು ಹೊಂದಿದ್ದರು ಎಂದು ಎಸ್‌ಪಿ ರೋಹಿತ್ ರಾಜ್ ಹೇಳಿದರು.