ವೆಸ್ಟ್ ಪಾಮ್ ಬೀಚ್ : ಯೆಮೆನ್ನ ಹೌತಿ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ಜನ ಸಾವನ್ನಪ್ಪಿದ್ದಾರೆ. ಪ್ರಮುಖ ಕಡಲ ಕಾರಿಡಾರ್ ಮೂಲಕ ಸಾಗುವ ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೂ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಬೃಹತ್ ಮಾರಕ ಶಕ್ತಿಯನ್ನು ಬಳಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿರುವುದು ಗಮನಾರ್ಹ.
"ಅಮೆರಿಕದ ಹಡಗು, ವಾಯು ಮತ್ತು ನೌಕಾ ಸ್ವತ್ತುಗಳನ್ನು ರಕ್ಷಿಸಲು ಮತ್ತು ನೌಕಾಯಾನ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ನಮ್ಮ ಧೀರ ಹೋರಾಟಗಾರರು ಭಯೋತ್ಪಾದಕರ ನೆಲೆಗಳು, ಮುಖಂಡರು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದಾರೆ" ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಅಮೆರಿಕದ ವಾಣಿಜ್ಯ ಮತ್ತು ನೌಕಾ ಹಡಗುಗಳು ವಿಶ್ವದ ಜಲಮಾರ್ಗಗಳಲ್ಲಿ ಮುಕ್ತವಾಗಿ ಸಂಚರಿಸುವುದನ್ನು ಯಾವುದೇ ಭಯೋತ್ಪಾದಕ ಸಂಘಟನೆಯು ತಡೆಯಲು ಸಾಧ್ಯವಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ.
ಬಂಡುಕೋರ ಗುಂಪುಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಇರಾನ್ಗೆ ಎಚ್ಚರಿಕೆ ನೀಡಿದ ಅವರು, ಇರಾನ್ ಬೆಂಬಲಿತ ಭಯೋತ್ಪಾದಕರ ದಾಳಿಗಳಿಗೆ ಇರಾನ್ ದೇಶವನ್ನೇ ಸಂಪೂರ್ಣವಾಗಿ ಹೊಣೆಗಾರನನ್ನಾಗಿ ಮಾಡುವುದಾಗಿ ಹೇಳಿದರು. ಇರಾನ್ನ ಮುಂದುವರಿದ ಪರಮಾಣು ಕಾರ್ಯಕ್ರಮದ ಬಗ್ಗೆ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳನ್ನು ಪುನರಾರಂಭಿಸುವ ಬಗ್ಗೆ ಇರಾನ್ ನಾಯಕರಿಗೆ ಟ್ರಂಪ್ ಪತ್ರ ಬರೆದ ಎರಡು ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಇರಾನ್ನ ಪರಮಾಣು ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರಲು ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಸೌದಿ ಅರೇಬಿಯಾದ ಗಡಿಯಲ್ಲಿರುವ ಬಂಡುಕೋರರ ಭದ್ರಕೋಟೆಯಾದ ರಾಜಧಾನಿ ಸನಾ ಮತ್ತು ಉತ್ತರ ಪ್ರಾಂತ್ಯದ ಸಾದಾದಲ್ಲಿ ಶನಿವಾರ ಸಂಜೆ ಬಾಂಬ್ ದಾಳಿಗಳು ನಡೆದಿವೆ ಎಂದು ಹೌತಿ ಬಂಡುಕೋರರು ಹೇಳಿದ್ದಾರೆ. ವಿಶಾಲವಾದ ಮಿಲಿಟರಿ ಸೌಲಭ್ಯವನ್ನು ಒಳಗೊಂಡಿರುವ ಸನಾ ವಿಮಾನ ನಿಲ್ದಾಣ ಸಂಕೀರ್ಣದ ಪ್ರದೇಶದ ಮೇಲೆ ಕಪ್ಪು ಹೊಗೆ ಆವರಿಸಿಕೊಂಡಿರುವ ಚಿತ್ರಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಹೊಡೆಡಾ, ಬೈಡಾ ಮತ್ತು ಮಾರಿಬ್ ಪ್ರಾಂತ್ಯಗಳ ಮೇಲೆ ಭಾನುವಾರ ಮುಂಜಾನೆ ವೈಮಾನಿಕ ದಾಳಿ ನಡೆದಿದೆ ಎಂದು ಹೌತಿಗಳು ತಿಳಿಸಿದ್ದಾರೆ.